ಬೆಂಗಳೂರು, ನವೆಂಬರ್ 09: ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ಸ್ಫೋಟಕ ವಿಚಾರಗಳು ತನಿಖೆ ವೇಳೆ ಬಯಲಾಗಿವೆ. ಕೃತ್ಯ ನಡೆಸಲು ಅಗತ್ಯ ವಸ್ತುಗಳನ್ನು ಏರಿಯಾದ ಸುತ್ತಮುತ್ತಲೇ ಆರೋಪಿ ಶೇಖರ್ ಖರೀದಿಸಿದ್ದ. ಮೃತದೇಹಗಳನ್ನು ಪ್ಯಾಕಿಂಗ್ ಮಾಡಲು ಬೇಕಿದ್ದ ಸಾಮಗ್ರಿಗಳು, ರಕ್ತ ಕ್ಲೀನ್ ಮಾಡಲು ಕೆಮಿಕಲ್ ಸೇರಿ ಇತರ ವಸ್ತುಗಳ ಖರೀದಿ ನಡೆಸಿದ್ದ. ಅಲ್ಲಿ ಸಿಗದೆ ಇರುವ ವಸ್ತುಗಳನ್ನ ಯಶವಂತಪುರ, RMCಯಾರ್ಡ್ನ ಅಂಗಡಿಗಳಿಗೆ ತೆರಳಿ ಸಂಗ್ರಹಿಸಿದ್ದ. ಆತ ಯಾವೆಲ್ಲ ವಸ್ತುಗಳನ್ನ ಖರೀದಿಸಿದ್ದ ಎಂಬ ಬಗ್ಗೆ ತನಿಖೆಗೆ ಅಂಗಡಿಗಳಿಗೆ ಹೋಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂಗಡಿಗಳ ಮಾಲೀಕರು, ಸಿಬ್ಬಂದಿಯಿಂದ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಇನ್ನು ಕೊಲೆ ನಡೆದ ಏರಿಯಾದಲ್ಲಿ ಕೆಲ ಸಿಸಿಟಿವಿ ಫೂಟೇಜ್ ಸಿಗದ ಕಾರಣ, ಅವುಗಳ ಸಂಗ್ರಯದ ಯತ್ನವೂ ನಡೆಯುತ್ತಿದೆ.
ಕೊಲೆಯಾದವರ ಪೈಕಿ ಇಬ್ಬರ ಶವಗಳು ಪತ್ತೆಯಾಗಬೇಕಿದ್ದು, ಶಂಕರ್ ಮತ್ತು ನಳಿನಿ ಶವಗಳಿಗಾಗಿ ಹುಡುಕಾಟ ಮುಂದುವರಿದಿದೆ. 7 ವರ್ಷದ ಬಾಲಕ ಪುನೀತ್ ಮೃತದೇಹವು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ, ಸೇಲಂನಲ್ಲಿ ಸುನೀತಾ ಹಾಗೂ ರೂಪವತಿ ಶವಗಳು ಮತ್ತು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಮತ್ತು ದಿವ್ಯಾ ದಂಪತಿ ಮೃತದೇಹಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: 7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್ ಮರ್ಡರ್ ಮಾಡಿ ಸೃಷ್ಟಿಸಿದ್ದ ಸಂಚಲನ!
ಇಂದು ಶಿವಕುಮಾರ್ ಹಾಗೂ ದಿವ್ಯಾ ಮೃತದೇಹ ಮರಣೋತ್ತರ ಪರೀಕ್ಷೆ
ನಿನ್ನೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪತ್ತೆಯಾಗಿದ್ದ ಶಿವಕುಮಾರ್ ಹಾಗೂ ದಿವ್ಯಾ ಮೃತದೇಹ ಮರಣೋತ್ತರ ಪರೀಕ್ಷೆ ಇಂದು ಮೈಸೂರು ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ನಡೆಯಲಿದೆ. ಆರೋಪಿ ಶೇಖರ್ ಮತ್ತು ಮೃತರ ಸಂಬಂಧಿಕರ ಸಮ್ಮುಖದಲ್ಲಿ ನಿನ್ನೆ ಮಹಜರು ಕಾರ್ಯ ನಡೆಸಲಾಗಿತ್ತು. ಮುಖ್ಯರಸ್ತೆಯಲ್ಲಿ ವಾಹನ ನಿಲ್ಲಿಸಿ ಪಕ್ಕದ ಕಂದಕಕ್ಕೆ ಆರೋಪಿ ಮೃತದೇಹ ಎಸೆದಿದ್ದ ಎಂಬುದು ಕೂಡ ಗೊತ್ತಾಗಿತ್ತು. ಹಂತಕ ಶೇಖರ್ ನೀಡಿದ ಮಾಹಿತಿಯಂತೆ ಹುಡುಕಾಟ ನಡೆಸಿದ್ದ ಪೊಲೀಸರು ಶವಗಳನ್ನು ಪತ್ತೆ ಮಾಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

