ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ಜೆಟ್ ವಿಮಾನ ಸಂಚಾರವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ್ದರಿಂದ ಆಕ್ರೋಶಗೊಂಡ ಪ್ರಯಾಣಿಕರು ವಿಮಾನಯಾನ ಸಂಸ್ಥೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದರು.
ನವೆಂಬರ್ 5ರಂದು ವಿಮಾನ ಹೊರಡುವುದಕ್ಕೆ ಅರ್ಧ ಗಂಟೆ ಬಾಕಿ ಇರುವಾಗ ವಿಮಾನ ಹಾರಾಟ ರದ್ದುಗೊಂಡಿದ್ದರಿಂದ 35ಕ್ಕೂ ಹೆಚ್ಚು ಪ್ರಯಾಣಿಕರು ತೊಂದರೆಗೆ ಸಿಲುಕಿದರು. ವಿಮಾನ ಸಂಚಾರ ರದ್ದತಿ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ ಪ್ರಯಾಣಿಕರು, ಸ್ಪೈಸ್ಜೆಟ್ ಕೌಂಟರ್ ಬಳಿ ಜಮಾಯಿಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ತುರ್ತು ಕೆಲಸಗಳಿಗಾಗಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಿದ್ದವರು ವಿಮಾನ ಸಂಚಾರ ರದ್ದತಿಯಿಂದ ಪರದಾಡುವಂತಾಯಿತು. ಪ್ರಯಾಣಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ವಿಮಾನ ರದ್ದತಿಗೆ ಕಾರಣ ತಿಳಿಸುವಂತೆ ಪ್ರಯಾಣಿಕರು ಒತ್ತಾಯಿಸಿದರು.
ಈ ವೇಳೆ ಕೆಲವು ಪ್ರಯಾಣಿಕರು ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳಾ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರಲಾಗಿದೆ.
ಘಟನೆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಮಾನಯಾನ ಸಂಸ್ಥೆಗಳ ಸೇವೆ ಹಾಗೂ ಪ್ರಯಾಣಿಕರೊಂದಿಗೆ ಸಿಬ್ಬಂದಿ ನಡೆದುಕೊಳ್ಳುವ ರೀತಿ ಚರ್ಚೆಗೆ ಕಾರಣವಾಗಿದೆ. ಕೊನೆ ಕ್ಷಣದಲ್ಲಿ ವಿಮಾನ ಸಂಚಾರ ರದ್ದುಗೊಳಿಸುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಅಭಿಪ್ರಾಯದ ಜತೆಗೆ ಸಿಬ್ಬಂದಿಯನ್ನು ನಿಂದಿಸುವುದೂ ಸರಿಯಲ್ಲ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

