ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್‌) ಲಖನೌಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ಹೈಜಾಕ್‌ ಪತ್ರ (ಅಪಹರಣದ ಬೆದರಿಕೆ) ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತಾಗಿ ಕೆಐಎಎಲ್‌ನಲ್ಲಿ ಇಳಿಸಲಾಗಿದೆ.

ಈ ಘಟನೆ ಶನಿವಾರ ನಡೆದಿದ್ದು, ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯಲ್ಲಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

ಇಂಡಿಗೊ ವಿಮಾನಯಾನ ಸಂಸ್ಥೆಯ 6ಇ-451 ವಿಮಾನವು ಶನಿವಾರ ಸಂಜೆ 5.50ರ ಸುಮಾರಿಗೆ ಕೆಐಎಎಲ್‌ನಿಂದ ನಿರ್ಗಮಿಸಿತ್ತು. 178 ಪ್ರಯಾಣಿಕರಿದ್ದ ಈ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ವಿಮಾನದ ಶೌಚಾಲಯದಲ್ಲಿ ಕೈ ಬರಹದ ಬೆದರಿಕೆ ಪತ್ರವೊಂದು ಸಿಬ್ಬಂದಿಗೆ ಸಿಕ್ಕಿದೆ.

‘ಈ ವಿಮಾನವನ್ನು ನಿಖರವಾಗಿ ಸಂಜೆ 6.30ಕ್ಕೆ ಹೈಜಾಕ್‌ ಮಾಡಲಾಗುತ್ತದೆ’ ಎಂಬ ಬೆದರಿಕೆಯ ಸಂದೇಶ ಬರೆಯಲಾಗಿತ್ತು. ಆ ಪತ್ರ ನೋಡಿ ಗಾಬರಿಯಾದ ಸಿಬ್ಬಂದಿಯು, ಪೈಲಟ್‌ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಏರ್‌ ಟ್ರಾಫಿಕ್‌ ಕಂಟ್ರೋಲ್‌ಗೆ (ಎಟಿಸಿ) ಮಾಹಿತಿ ನೀಡಿ, ವಿಮಾನವನ್ನು ತುರ್ತಾಗಿ ಕೆಐಎಎಲ್‌ನಲ್ಲಿಇಳಿಸಿದ್ದಾರೆ.

ಪ್ರಯಾಣಿಕರ ತಪಾಸಣೆ: ವಿಮಾನ ಸುರಕ್ಷಿತವಾಗಿ ಕೆಐಎಎಲ್‌ನಲ್ಲಿ ಇಳಿದ ನಂತರ ಭದ್ರತಾ ಸಿಬ್ಬಂದಿಯು ಎಲ್ಲಾ 178 ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ಮಾಡಿದರು. ವಿಮಾನದಲ್ಲಿ ಇಂಚಿಂಚೂ ಶೋಧ ನಡೆಸಿದರು.  ಪ್ರಯಾಣಿಕರೇ ಈ ಪತ್ರ ಬರೆದು ಶೌಚಾಲಯದಲ್ಲಿಇಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕೆಂಪೇಗೌಡ ಏರ್‌ಪೋರ್ಟ್‌ ಠಾಣೆ ಪೊಲೀಸರು ಪ್ರಯಾಣಿಕರ ವಿಚಾರಣೆ ನಡೆಸುತ್ತಿದ್ದಾರೆ.

ಪ್ರಯಾಣಿಕರ ಸುರಕ್ಷತೆಯೇ ಆದ್ಯತೆ: 6ಇ-451 ವಿಮಾನದಲ್ಲಿ ಅಪಹರಣದ ಪತ್ರ ಪತ್ತೆಯಾಗಿರುವುದನ್ನು ಖಚಿತಪಡಿಸಿರುವ ಇಂಡಿಗೊ ಸಂಸ್ಥೆ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಭದ್ರತಾ ತಪಾಸಣೆ ಹಾಗೂ ಇತರೆ ಶಿಷ್ಟಾಚಾರ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ದೊರೆತ ನಂತರವಷ್ಟೇ ವಿಮಾನ ಲಖನೌಗೆ ತೆರಳಲಿದೆ ಎಂದು ಹೇಳಿದೆ.

ನಿಗದಿತ ಕಾರ್ಯಾಚರಣೆ ಮಾರ್ಗಸೂಚಿ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಲಾಗಿದೆ. ಅಗತ್ಯ ಭದ್ರತಾ ತಪಾಸಣೆಗಾಗಿ ವಿಮಾನವನ್ನು ಮರಳಿ ಬೆಂಗಳೂರಿನ ಕೆಐಎಎಲ್‌ನಲ್ಲಿ ಇಳಿಸಲು ಪೈಲಟ್‌ಗಳು ನಿರ್ಧರಿಸಿದರು. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಪ್ರಯಾಣಿಕರಿಗಾಗಿ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಮಾಡಲಾಗಿದೆ.  ಮುಂದಿನ ಕ್ರಮಗಳ ಕುರಿತು ಪ್ರಯಾಣಿಕರಿಗೆ ನಿರಂತರ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆಯು ತಿಳಿಸಿದೆ.