ಬೆಂಗಳೂರು: ಏಳು ಮಂದಿ ಹತ್ಯೆ ಸಂಬಂಧ ರಾಜಾಜಿನಗರ ಠಾಣೆ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತಿಬ್ಬರ ಮೃತದೇಹಗಳನ್ನು ಪತ್ತೆಹಚ್ಚಿದ್ದು, ಆರೋಪಿ ಎಸ್‌.ಇಂದುಶೇಖರ್‌ನಿಂದ ಕೊಲೆಯಾಗಿದ್ದ ಶಿವಕುಮಾರ್‌ ಮತ್ತು ದಿವ್ಯಾ ದಂಪತಿಯ ಮೃತದೇಹಗಳು ಎಂದು ಗುರುತಿಸಲಾಗಿದೆ.

ಇದರೊಂದಿಗೆ ಐದು ಶವಗಳು ಪತ್ತೆಯಾಗಿವೆ. ಇನ್ನೂ ಶಂಕರ್‌ ಮತ್ತು ನಳಿನಿ ದಂಪತಿಯ ಶವಗಳನ್ನು ಶಿರಾಡಿ ಘಾಟ್‌ನಲ್ಲಿ ಎಸೆದಿರುವುದಾಗಿ ಆರೋಪಿ ಹೇಳಿದ್ದು, ಅವುಗಳು ಪತ್ತೆ ಆಗಬೇಕಿದೆ.

ತಾವರೆಕಟ್ಟೆಯಿಂದ ಚಾಮುಂಡಿ ಬೆಟ್ಟ ದೇವಾಲಯಕ್ಕೆ ತೆರಳುವ ಮಾರ್ಗದ ನಡುವೆ ಬೆಡ್‌ಶೀಟ್‌ನಲ್ಲಿ ಸುತ್ತಿದ ಎರಡು ಮೃತದೇಹಗಳು ಪತ್ತೆಯಾಗಿದ್ದು, ಹಗ್ಗದಿಂದ ಬಿಗಿದು, ಪ್ಲಾಸ್ಟಿಕ್ ಕವರ್‌ ಬಳಸಿ, ಗೋಣಿಚೀಲದಲ್ಲಿ ಕಟ್ಟಿ ಬಿಸಾಡ ಲಾಗಿತ್ತು. ಆರೋಪಿಯನ್ನು ಕರೆತಂದು ಸ್ಥಳ ಮಹಜರು ನಡೆಸಲಾಯಿತು. ಸಂಬಂಧಿಕರು ಸಹ ಶವಗಳನ್ನು ಗುರುತಿಸಿದರು.

‘ಚಾಮುಂಡೇಶ್ವರಿ ದೇವಾಲಯ ದಿಂದ ನಾಲ್ಕು ಕಿ.ಮೀ ದೂರ ದಲ್ಲಿರುವ ಜಾಗದಲ್ಲಿ ಪತ್ತೆಯಾದ ಶಿವಕುಮಾರ್, ದಿವ್ಯಾ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಕೆ.ಆರ್.ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಸೋಮವಾರ ಬೆಂಗಳೂರಿನಲ್ಲಿ ಒಂದೇ ಕಡೆ ಎಲ್ಲರ ಅಂತ್ಯಕ್ರಿಯೆ ನಡೆಸಲು ಮೃತರ ಕುಟುಂಬದ ಸದಸ್ಯರು ನಿರ್ಧರಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಏರ್ಕಾಡ್‌ ಅರಣ್ಯ ಪ್ರದೇಶದಲ್ಲಿ ಶನಿವಾರ ಪತ್ತೆಯಾದ ಬೆಡ್‌ಶೀಟ್‌ ಹಾಗೂ ಸೀರೆಗಳಲ್ಲಿ ಸುತ್ತಿ ಬಿಸಾಡಿದ್ದ ಆರೋಪಿ ಇಂದುಶೇಖರ್‌ನ ಪತ್ನಿ ಸುನಿತಾ ಮತ್ತು ಅತ್ತೆ ರೂಪವತಿ ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆ ಯನ್ನು ಸೇಲಂ ಆಸ್ಪತ್ರೆಯಲ್ಲಿ ನಡೆಸಿ, ವಾರಸುದಾರರಿಗೆ ಹಸ್ತಾಂತರಿಸ ಲಾಯಿತು. ಕುಟುಂಬದ ಸದಸ್ಯರು ಮೃತದೇಹಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬರುತ್ತಿದ್ದಾರೆ.

‘ಮೃತದೇಹಗಳನ್ನು ಇಳಿಜಾರಿನ ಕಣಿವೆಯಲ್ಲಿ ಎಸೆಯಲಾಗಿತ್ತು. ಜೋರು ಮಳೆ ಬಂದರೆ ಕೊಚ್ಚಿ ಹೋಗಲಿದ್ದು, ಯಾರಿಗೂ ಅವಶೇಷ ಸಿಗುವುದಿಲ್ಲ ಎಂಬ ಲೆಕ್ಕಾಚಾರ ಆರೋಪಿಯದಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದವರ ಪೈಕಿ ಬಾಲಕ ಪುನೀತ್ ಮೃತದೇಹ ನಂದಿ ಬೆಟ್ಟದಲ್ಲಿ ಸಿಕ್ಕಿದೆ. ಉಳಿದಂತೆ ಶಂಕರ್ ಹಾಗೂ ನಳಿನಿ ಅವರ ಶವಗಳ ಪತ್ತೆಗಾಗಿ ಶಿರಾಡಿಘಾಟ್‌ಗೆ ಸೋಮವಾರ ಆರೋಪಿ ಯನ್ನು ಕರೆದೊಯ್ಯಲಾಗುವುದು. ಈಗಾಗಲೇ ಅಲ್ಲಿನ ಪೊಲೀಸರ ಜತೆ ಸಮಾಲೋಚನೆ ನಡೆಸಿದ್ದು, ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ನಿಗಾವಹಿಸು ವಂತೆ ಕೋರಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ತನಿಖೆಯ ಜವಾಬ್ದಾರಿ ಯನ್ನು ಉತ್ತರ ವಿಭಾಗದ ಡಿಸಿಪಿ ಬಾಬಾಸಾಬ್‌ ನೇಮಗೌಡ ಅವರಿಗೆ ವಹಿಸಲಾಗಿದೆ. ಮೂವರು ಇನ್‌ಸ್ಪೆಕ್ಟರ್‌ಗಳು ಹಾಗೂ 30ಕ್ಕೂ ಹೆಚ್ಚು ಸಿಬ್ಬಂದಿ ತನಿಖಾ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೊಲೀಸರ ವಶದಲ್ಲಿರುವ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.

ಜೈಲಿನಲ್ಲೇ ಆರೋಪಿಯ ಅಣ್ಣ ಸಾವು

ಏಳು ಮಂದಿಯ ಕೊಲೆ ಆರೋಪಿ ಎಸ್‌.ಇಂದುಶೇಖರ್‌, 2018ರಲ್ಲಿ ನಡೆದಿದ್ದ ಕೊಲೆ ಆರೋಪಿ ಬೆಳತ್ತೂರು ರಮೇಶ್‌ನ ಸಹೋದರ ಎಂಬ ವಿಚಾರ ಪೊಲೀಸರ ತನಿಖೆ ಯಲ್ಲಿ ಗೊತ್ತಾಗಿದೆ. ರೌಡಿಶೀಟರ್‌ ಬೆಳತ್ತೂರು ರಮೇಶ್‌, ₹1.50 ಕೋಟಿ ಮೌಲ್ಯದ 1.8 ಎಕರೆ ಜಾಗಕ್ಕಾಗಿ ಈ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದರರು ಅಪರಾಧ ಹಿನ್ನೆಲೆ ಹೊಂದಿದ್ದು, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಬೆಳತ್ತೂರು ರಮೇಶ್‌, ಆಸ್ತಿ ವಿಚಾರವಾಗಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ.

ಬೆಳತ್ತೂರು ಸಮೀಪ ಜಾಗ ಹೊಂದಿದ್ದ ನಂಜಪ್ಪ ಎಂಬುವರು ವಯೋಸಹಜವಾಗಿ ಮೃತಪಟ್ಟಿದ್ದರು. ನಂಜಪ್ಪ ಅವರ ಜಾಗವು ಬೆಳತ್ತೂರು ರಮೇಶ್‌ನ ಫಾರ್ಮ್‌ ಹೌಸ್‌ಗೆ ಹೊಂದಿಕೊಂಡಂತೆ ಇತ್ತು. ಆ ಜಾಗ ಕಬಳಿಸಲು ಬೆಳತ್ತೂರು ರಮೇಶ್‌ ಸಂಚು ಮಾಡಿದ್ದ. ಅದಕ್ಕಾಗಿ ಕೃಷ್ಣಪ್ಪ ಎಂಬಾತನನ್ನು ನಂಜಪ್ಪ ಎಂದು ಬಿಂಬಿಸಿ, ಆತನ ಹೆಸರಿನಲ್ಲಿ ನಕಲಿ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಹಾಗೂ ಆಸ್ತಿಯ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ವಿಲ್‌ ಬರೆಸಿಕೊಂಡಿದ್ದ. ನಂತರ ಕೃಷ್ಣಪ್ಪನನ್ನು ಕೊಲೆ ಮಾಡಿ, ಡಾ.ಕುಲಕರ್ಣಿ ಎಂಬ ವೈದ್ಯರಿಂದ ನಂಜಪ್ಪರ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರ ಮಾಡಿಸಿದ್ದ.

ಕೃಷ್ಣಪ್ಪನ ಕೊಲೆ ಕೃತ್ಯದಲ್ಲಿ ಬೆಳತ್ತೂರು ರಮೇಶ್‌ನ ತೋಟದ ಕಾವಲುಗಾರ ಎ.ವೆಂಕಟಸ್ವಾಮಿ ಸಹ ಭಾಗಿಯಾಗಿದ್ದ. ಅಲ್ಲದೆ, ಕೊಲೆಯ ನಂತರ ಆತನೇ ಕೆ.ಆರ್‌.ಪುರದಲ್ಲಿ ಕೃಷ್ಣಪ್ಪನ ಅಂತ್ಯಕ್ರಿಯೆ ಮಾಡಿದ್ದ. ಬಳಿಕ ಆತ ಕೃಷ್ಣಪ್ಪನ ಕೊಲೆ ವಿಚಾರವನ್ನು ತನ್ನ ಪತ್ನಿ ಸುಧಾರಾಣಿಗೆ ಹೇಳಿದ್ದ. ಇದರಿಂದ ಕೋಪಗೊಂಡ ಆಕೆ, ಪತಿ ಜೊತೆ ಜಗಳವಾಡಿದ್ದಳು. ಬಳಿಕ ಜಗಳ ವಿಕೋಪಕ್ಕೆ ಹೋಗಿ ಪತ್ನಿಯನ್ನು ಹೊಡೆದು ಕೊಲೆ ಮಾಡಿದ್ದ.

ನಂತರ ಬೆಳತ್ತೂರು ರಮೇಶ್‌ನ ಜೊತೆ ಸೇರಿ ಪತ್ನಿಯ ಶವಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ. ಆತನೇ ಪೊಲೀಸ್‌ ಠಾಣೆಗೆ ಹೋಗಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದ. ಆದರೆ, ತನಿಖೆಯಲ್ಲಿ ಕೊಲೆ ಎಂದು ಪತ್ತೆಯಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷ್ಣಪ್ಪ ಮತ್ತು ಸುಧಾರಾಣಿ ಕೊಲೆ ಪ್ರಕರಣದಲ್ಲಿ ಆವಲಹಳ್ಳಿ ಪೊಲೀಸರು ಬೆಳತ್ತೂರು ರಮೇಶ್‌, ವೆಂಕಟಸ್ವಾಮಿ, ಡಾ.ಕುಲಕರ್ಣಿ ಮತ್ತು ಶಂಕರಪ್ಪ ಎಂಬುವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮೂರು ವರ್ಷ ಜೈಲಿನಲ್ಲಿದ್ದ ಬೆಳತ್ತೂರು ರಮೇಶ್‌, 2021ರಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಸಕ್ರಿಯನಾಗಿದ್ದ ಬೆಳತ್ತೂರು ರಮೇಶ್‌, ವರ್ತೂರು ಭಾಗದಲ್ಲಿ ಭೂ ಮಾಫಿಯಾ ನಡೆಸಿದ್ದ. ಆತನ ವಿರುದ್ಧ ಭೂ ಕಬಳಿಕೆ, ನಕಲಿ ದಾಖಲೆಗಳ ಸೃಷ್ಟಿ, ಜೀವ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ, ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ರೌಡಿಪಟ್ಟಿ ಯಲ್ಲಿ ಆತನ ಹೆಸರಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಭೂ ಮಾಫಿಯಾ:

ಹತ್ಯೆಗೂ ಮುನ್ನ ಕ್ರೈಂ ಸಿನಿಮಾ ವೀಕ್ಷಣೆ

ಒಟಿಟಿಗಳಲ್ಲಿ ಕ್ರೈಂ ಥ್ರಿಲ್ಲರ್‌ ವೆಬ್‌ ಸಿರೀಸ್‌ಗಳು, ಸಿನಿಮಾ ಗಳನ್ನು ನೋಡಿ ಆರೋಪಿ ಸರಣಿ ಕೊಲೆಗೆ ಸಂಚು ರೂಪಿಸಿದ್ದ. ಅಲ್ಲದೇ ಹತ್ಯೆ ಬಳಿಕ ತಪ್ಪಿಸಿಕೊಳ್ಳಲು ತಂದೆ,‌ ಮಗಳು ಪ್ರಯತ್ನಿಸಿದ್ದರು ಎಂದು ಮೂಲಗಳು ಹೇಳಿವೆ.

ವಿಚಾರಣೆ ವೇಳೆ ಸಂಬಂಧಿಕರನ್ನು ಮನೆಗೆ ಹೇಗೆ ಕರೆಸಿಕೊಂಡು, ಏಳು ಮಂದಿಯನ್ನು ಯಾವ ರೀತಿ ಕೊಲೆ ಮಾಡಿ, ಶವಗಳನ್ನು ಸಾಗಿಸಿದೆ ಎಂಬ ಅಂಶಗಳನ್ನು ಆರೋಪಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

‘ಸರಣಿ ಹತ್ಯೆಗೆ ಕ್ರೈಂ ಥ್ರಿಲ್ಲರ್ ಸಿನಿಮಾಗಳನ್ನು ನೋಡಿ ಪ್ರಭಾವಿತನಾಗಿದ್ದೆ. ಅಲ್ಲದೆ ಇಂಟರ್‌ನೆಟ್‌ ಜಾಲಾಡಿ ಕೊಲೆ ಹೇಗೆ ಮಾಡಬೇಕು. ಶವಗಳನ್ನು ಹೇಗೆ ಸಾಗಿಸಬೇಕು..ಮುಂತಾದ ಅಂಶಗಳನ್ನು ನೋಡಿ ತಿಳಿದುಕೊಂಡಿದ್ದೆ.  ಅದಕ್ಕಾಗಿ ಕೃತ್ಯಕ್ಕೆ ಬೇಕಾದ ನಿದ್ರೆ ಮಾತ್ರೆ, ಹಗ್ಗ, ಪ್ಲಾಸ್ಟಿಕ್‌, ಗೋಣಿ ಚೀಲಗಳನ್ನು ತಂದಿಟ್ಟುಕೊಂಡಿದ್ದೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

‘ಮೊದಲು ಪತ್ನಿಯನ್ನು ಕೊಲೆ ಮಾಡಿ, ಮಗಳ ಮೂಲಕ ಅವಳ ಅಜ್ಜಿ ಮತ್ತು ಸೋದರ ಮಾವಂದಿರು, ಅತ್ತೆಯಂದಿರನ್ನು ಮನೆಗೆ ಕರೆಸಿಕೊಳ್ಳುತ್ತಿದ್ದೆ. ನಿದ್ರೆ ಮಾತ್ರೆ ಹಾಕಿದ ಊಟವನ್ನು ಅವರು ತಿಂದ ಬಳಿಕ ಪ್ರಜ್ಞಾಹೀನರಾಗುತ್ತಿದ್ದರು. ಆಗ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಶವಗಳನ್ನು ಸ್ನಾನದ ಕೋಣೆಗೆ ಎಳೆದೊಯ್ದು ಹಾಕುತ್ತಿದ್ದೆ. ಅಲ್ಲಿ ರಕ್ತ ಹರಿದು ಹೋದ ಬಳಿಕ, ಗೋಣಿ ಚೀಲಗಳಲ್ಲಿ ಶವವನ್ನು ತುಂಬಿ ವಾಸನೆ ಬಾರದಂತೆ ರಾಸಾಯನಿಕ ಸಿಂಪಡಿಸಿ, ಕಾರಿನಲ್ಲಿ ಹಾಕಿಕೊಂಡು ಹೋಗಿ ಬಿಸಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ’ ಎಂದು ಗೊತ್ತಾಗಿದೆ.

ಒಂದೇ ಕುಟುಂಬದ 7 ಜನರ ಹತ್ಯೆ: ಏರ್ಕಾಡ್‌ ಕಾಡಿನಲ್ಲಿ ಪತ್ನಿ, ಅತ್ತೆ ಶವ ಪತ್ತೆಏಳು ಮಂದಿ ಹತ್ಯೆ ಬಳಿಕ ‌ಚಿನ್ನಾಭರಣ ದೋಚಿದ್ದ ಆರೋಪಿ