ಬೆಂಗಳೂರು: ‘ಗೆಜೆಟೆಡ್ ಪ್ರೊಬೇಷನರಿ 319 ಹುದ್ದೆಗಳಿಗೆ ಇದೇ 15ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದ್ದು ಸಿದ್ಧತೆಗಳು ಪೂರ್ಣಗೊಂಡಿವೆ. ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲದಂತೆ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಕೆ. ಜ್ಯೋತಿ ಮತ್ತು ಪರೀಕ್ಷಾ ನಿಯಂತ್ರಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಅಭ್ಯರ್ಥಿಗಳನ್ನು ಉದ್ದೇಶಿಸಿ ವಿಡಿಯೊ ಹೇಳಿಕೆ ನೀಡಿರುವ ಅವರು, ‘ಅಭ್ಯರ್ಥಿಗಳು ಊಹಾಪೋಹಗಳಿಗೆ ಕಿವಿಗೊಡದೆ, ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಬೇಕು. ಈ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ, ಫಲಿತಾಂಶ ಪ್ರಕಟಣೆ ಎಲ್ಲವನ್ನೂ ಈಗಾಗಲೇ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಡೆಸಲಾಗುವುದು’ ಎಂದಿದ್ದಾರೆ.
ಕೆ. ಜ್ಯೋತಿ ಮಾತನಾಡಿ, ‘ಕೆಪಿಎಸ್ಸಿಯಿಂದ ನಡೆದಿರುವ ಹಲವು ಲೋಪದೋಷಗಳು ಮರುಕಳಿಸದಂತೆ ಅಚ್ಚುಕಟ್ಟಾಗಿ, ಪಾರದರ್ಶಕವಾಗಿ, ಗೋಪ್ಯವಾಗಿ ಪರೀಕ್ಷೆ ನಡೆಸಲು ಸಾಧ್ಯವಾಗುವಂತೆ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದೇವೆ. ಅಧಿಸೂಚನೆಯಲ್ಲಿ ನಿಗದಿಪಡಿಸಿದಂತೆ ನೇಮಕಾತಿ ಪ್ರಕ್ರಿಯೆಯನ್ನು ಅಂತಿಮಗೊಳಿಸಿ, 2027ರ ಜೂನ್ನಲ್ಲಿ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲು ಪ್ರಯತ್ನಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
‘ಅಭ್ಯರ್ಥಿಗಳ ಬೇಡಿಕೆಯಂತೆ, ಯುಪಿಎಸ್ಸಿ ಮಾದರಿಯಲ್ಲಿ ವೇಳಾಪಟ್ಟಿಗೆ ಅನುಗುಣವಾಗಿ ಎಲ್ಲ ಪ್ರಕ್ರಿಯೆಗಳನ್ನು ನಡೆಸಲು ತಯಾರಿ ಮಾಡಿಕೊಂಡಿದ್ದೇವೆ. ಪರೀಕ್ಷೆ ಬರೆಯುವವರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಸುಧಾರಣಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಅಭ್ಯರ್ಥಿಗಳು ಈ ಪ್ರಕ್ರಿಯೆಯಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು. ಏನೇ ಕಾನೂನು ತೊಡಕು ಬಂದರೂ ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗಲು ಪ್ರಯತ್ನಿಸುತ್ತೇವೆ. ಯಾವುದೇ ಗೊಂದಲ ಬೇಡ’ ಎಂದು ಹೇಳಿದ್ದಾರೆ.
‘ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಡತಳಿತದ ಮೂಲಕ ಪ್ರಶ್ನೆಪತ್ರಿಕೆಗಳು ತಲುಪಲಿವೆ. ಇಡೀ ಪರೀಕ್ಷೆ, ನಂತರದ ಪ್ರಕ್ರಿಯೆಗಳು ಸಿಸಿಟಿವಿ ಕ್ಯಾಮೆರಾದ ಕಣ್ಗಾವಲಿನಲ್ಲಿ ನಡೆಯಲಿದೆ. ಪರೀಕ್ಷೆ ಮುಗಿದ ತಕ್ಷಣ ಒಎಂಆರ್ ಶೀಟ್ಗಳನ್ನು ಸ್ಕ್ಯಾನಿಂಗ್ ಮಾಡಿ ವೆಬ್ಸೈಟ್ಗೆ ಅಪ್ಲೋಡ್ ಮಾಡುತ್ತೇವೆ. ಅಭ್ಯರ್ಥಿಗಳು ಯಾವುದೇ ಅನುಮಾನ, ಭಯ ಇಲ್ಲದೆ ಪರೀಕ್ಷೆ ಎದುರಿಸಬೇಕು’ ಎಂದೂ ಅವರು ಮನವಿ ಮಾಡಿದ್ದಾರೆ.
ಪರೀಕ್ಷಾ ಸುಧಾರಣಾ ಕ್ರಮಗಳ ಕುರಿತು ವಿವರವಾಗಿ ಮಾತನಾಡಿರುವ ಎಚ್. ಪ್ರಸನ್ನ, ಅಭ್ಯರ್ಥಿಗಳ ಎಲ್ಲ ಅನುಮಾನಗಳಿಗೆ ಉತ್ತರ ನೀಡಿದ್ದಾರೆ. ‘ನಿಗದಿತ ಅವಧಿಯಲ್ಲಿ ಪರೀಕ್ಷೆ ನಡೆಸಬೇಕೆಂಬ ಅಭ್ಯರ್ಥಿಗಳ ಒತ್ತಾಸೆಯಂತೆ ಎಲ್ಲವನ್ನೂ ಮಾಡುತ್ತಿದ್ದೇವೆ. ಪರೀಕ್ಷಾ ವ್ಯವಸ್ಥೆಯಲ್ಲಿ ಹೆಚ್ಚಿನ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ರಾಜ್ಯ ಸರ್ಕಾರ ಕೂಡಾ ಪೂರಕವಾಗಿ ಸ್ಪಂದಿಸಿದೆ’ ಎಂದಿದ್ದಾರೆ.
‘ಪ್ರತಿ ಕೊಠಡಿಯಲ್ಲಿ ತಲಾ 24 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಕೊಠಡಿಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮೇಲ್ವಿಚಾರಕರು ಇರಲಿದ್ದಾರೆ. ಅವರು ನಿಗಾ ವಹಿಸುವ ಜೊತೆಗೆ, ಸಿಸಿಟಿವಿ ಕ್ಯಾಮೆರಾ, ಜಾಮರ್ ಅಳವಡಿಸಿ ಹದ್ದಿನ ಕಣ್ಣಿಡಲಾಗುವುದು. ಸಿಸಿಟಿವಿ ಕ್ಯಾಮೆರಾಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಕ್ರಮ ಚಟುವಟಿಕೆ, ಅನುಮಾನಗಳಿಗೆ ಅವಕಾಶ ಆಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ ಎಂದಿದ್ದಾರೆ.
‘5ನೇ ವೃತ್ತ: ಅನ್ಯಾಯ ಹೇಗೆ?’
‘ಸುಧಾರಣಾ ಕ್ರಮಗಳನ್ನು ಕಟ್ಟುನಿಟ್ಟಿನಿಂದ ತೆಗೆದುಕೊಂಡಿರುವಾಗ, ಪರೀಕ್ಷೆಯನ್ನು ಮುಂದೂಡಬೇಕೆಂದು ಕೆಲವು ಅಭ್ಯರ್ಥಿಗಳು ಒತ್ತಾಯಿಸುವುದರಲ್ಲಿ ಅರ್ಥ ಇಲ್ಲ. ಒಎಂಆರ್ ಶೀಟ್ನಲ್ಲಿ 5ನೇ ವೃತ್ತವನ್ನು ಮೊದಲ ಬಾರಿಗೆ ಅಳವಡಿಸಿದ್ದೇವೆ. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಎಂಆರ್ ಶೀಟ್ ತಿದ್ದುಪಡಿ ಆಗುತ್ತಿದೆ ಎಂಬ ಅಭ್ಯರ್ಥಿಗಳ ಆರೋಪ, ಅನುಮಾನವನ್ನು ನಿವಾರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಪ್ರಸನ್ನ ಸಮರ್ಥನೆ ನೀಡಿದ್ದಾರೆ.
‘ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು 2 ಗಂಟೆಯಲ್ಲಿ 100 ಪ್ರಶ್ನೆಗಳನ್ನು ಉತ್ತರಿಸಬೇಕು. ಯಾವುದಾದರು ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಇದ್ದರೆ, ಕೊನೆಯ ಬೆಲ್ನ ನಂತರ ನೀಡಲಾಗುವ ಹೆಚ್ಚುವರಿ ಐದು ನಿಮಿಷಗಳ ಅವಧಿಯಲ್ಲಿ 5ನೇ ವೃತ್ತವನ್ನು ಶೇಡ್ ಮಾಡಬೇಕು. ಉತ್ತರ ಗೊತ್ತಿಲ್ಲದವರು ಎಲ್ಲ ನಾಲ್ಕು ವೃತ್ತಗಳನ್ನು ಖಾಲಿ ಬಿಟ್ಟು, 5ನೇ ವೃತ್ತವನ್ನು ಶೇಡ್ ಮಾಡಿದರೆ ಅಂಕ ಕಡಿತ ಆಗುವುದಿಲ್ಲ. ತಪ್ಪು ಉತ್ತರಕ್ಕೆ ಶೇಡ್ ಬರೆದರೆ ಮಾತ್ರ ಅಂಕ ಕಡಿತವಾಗುತ್ತದೆ. ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ 5ನೇ ವೃತ್ತ ಅಳವಡಿಸಲಾಗುತ್ತಿದೆ. ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಕೆಲವು ಅಭ್ಯರ್ಥಿಗಳು ವಾದ ಮಾಡುತ್ತಿದ್ದಾರೆ. ಇದರಿಂದ ಅಭ್ಯರ್ಥಿಗಳಿಗೆ ಯಾವ ರೀತಿಯ ಅನ್ಯಾಯವಾಗಲಿದೆ ಎನ್ನುವುದು ಅರ್ಥವಾಗುತ್ತಿಲ್ಲ’ ಎಂದೂ ಅವರು ಹೇಳಿದ್ದಾರೆ.
ಸಿ.ಎಂ ವಿಡಿಯೊ ಸಂವಾದ 12ರಂದು
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ನಡೆಯಲಿರುವ ಪರೀಕ್ಷೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತಯಾರಿಯ ಬಗ್ಗೆ ಚರ್ಚಿಸಲು ಎಲ್ಲ ಜಿಲ್ಲಾಧಿಕಾರಿಗಳು, ಎಲ್ಲ ವಲಯ ಪೊಲೀಸ್ ಮಹಾ ನಿರೀಕ್ಷಕರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರ ಜೊತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದೇ 12ರಂದು ವಿಡಿಯೊ ಸಂವಾದ ನಡೆಸಲಿದ್ದಾರೆ. ವಿಧಾನಸೌಧದಲ್ಲಿ ಬೆಳಿಗ್ಗೆ 10 ಗಂಟೆಗೆ ಈ ಸಂವಾದ ನಡೆಯಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮೂಲಗಳು ತಿಳಿಸಿವೆ.

