ಬೆಂಗಳೂರು: ದೀಪಾವಳಿ ಹಬ್ಬದ ದಿನವಾದ ಭಾನುವಾರ ಪಟಾಕಿ ಅವಘಡದಿಂದ 32 ಮಂದಿ ಕಣ್ಣಿಗೆ ಗಾಯ ಮಾಡಿಕೊಂಡಿದ್ದಾರೆ.

ನಾರಾಯಣ ನೇತ್ರಾಲಯದಲ್ಲಿ 20 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ಗಾಯಗೊಂಡವರಲ್ಲಿ ಏಳು ಮಂದಿ ವಯಸ್ಕರಾದರೆ, 13 ಮಂದಿ ಮಕ್ಕಳಾಗಿದ್ದಾರೆ. ಪಟಾಕಿ ಸಿಡಿಸುವವರ ಜತೆಗೆ, ವೀಕ್ಷಿಸುವ ವೇಳೆ ಕೆಲವರು ಗಾಯಗೊಂಡಿದ್ದಾರೆ. ಪಟಾಕಿ ಕಿಡಿ ಕಣ್ಣಿಗೆ ಸಿಡಿದು ದೃಷ್ಟಿಗೆ ಹಾನಿ ಮಾಡಿಕೊಂಡಿದ್ದಾರೆ.

17 ಮಂದಿ ಪಟಾಕಿ ಹಚ್ಚುವ ವೇಳೆ ಗಾಯಗೊಂಡರೆ, ಮೂವರಿಗೆ ಪಟಾಕಿ ಸಿಡಿತ ವೀಕ್ಷಿಸುತ್ತಿರುವ ವೇಳೆ ಗಾಯವಾಗಿದೆ. 

ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸಲಾಗಿದೆ. ಪಟಾಕಿ ಸಿಡಿಸುವಾಗ ರಕ್ಷಣಾ ಕನ್ನಡಕ ಧರಿಸಬೇಕು. ಗಾಯವಾದರೆ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ನಾರಾಯಣ ನೇತ್ರಯಾಲಯದ ವೈದ್ಯರು ತಿಳಿಸಿದ್ದಾರೆ.

ಮಿಂಟೊ ಆಸ್ಪತ್ರೆಯಲ್ಲಿ ಒಂಬತ್ತು ಪಟಾಕಿ ಗಾಯ ಪ್ರಕರಣ ವರದಿಯಾಗಿದೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಇಬ್ಬರು ಹಾಗೂ ಪ್ರಭಾ  ಕಣ್ಣಿನ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆದಿದ್ದಾರೆ.