ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಸೇವಾನುಭವ ಮತ್ತು ಹಿರಿತನವನ್ನು ಗುರುತಿಸುವ ಉದ್ದೇಶದಿಂದ ಅವರ ಸಮವಸ್ತ್ರದ ಮೇಲೆ ಪ್ರತ್ಯೇಕ ಗುರುತಿನ ಚಿಹ್ನೆಗಳನ್ನು ಅಳವಡಿಸುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರ ಬರೆದಿರುವ ಅವರು, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯ ಸೇವಾ ಹಿರಿತನಕ್ಕೆ ಅನುಗುಣವಾಗಿ ವಿಶೇಷ ಪದನಾಮ ಗಳನ್ನು ನೀಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಾರೆ. ಆದರೆ, ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಿಬ್ಬಂದಿಯ ಅನುಭವವನ್ನು ಪ್ರತ್ಯೇಕವಾಗಿ ಗುರುತಿಸದೆ ಇಲ್ಲದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇಲಾಖೆಯಲ್ಲಿ ಹುದ್ದೆ ಮತ್ತು ಶ್ರೇಣಿಗೆ ಅನುಗುಣವಾಗಿ ಸಮವಸ್ತ್ರದ ಮೇಲೆ ಗುರುತಿನ ಚಿಹ್ನೆಗಳನ್ನು ಬಳಸಲಾಗುತ್ತಿದೆ.ಆದರೆ, ಒಂದೇ ಹುದ್ದೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸಿಬ್ಬಂದಿಯ ಸೇವಾನುಭವವನ್ನು ಪ್ರತ್ಯೇಕವಾಗಿ ಗುರುತಿಸುವ ವ್ಯವಸ್ಥೆಯಿಲ್ಲ ಎಂಬ ಅಭಿಪ್ರಾಯವನ್ನು ಪತ್ರದಲ್ಲಿ ವ್ಯಕ್ತ ಪಡಿಸಲಾಗಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿಯ ಸೇವಾವಧಿಯನ್ನು ಆಧರಿಸಿ 3 ಹಂತಗಳಲ್ಲಿ ಪ್ರತ್ಯೇಕ ಪದನಾಮ ಗಳನ್ನು ನೀಡುವಂತೆ ಪ್ರಸ್ತಾಪಿಸಲಾಗಿದೆ. ಐದು ವರ್ಷ ಸೇವೆ ಪೂರ್ಣಗೊಳಿಸಿದವರಿಗೆ ‘ಸೀನಿಯರ್’ (ಹಿರಿಯ), ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ ‘ಸೂಪರ್ ಸೀನಿಯರ್’ (ಅತಿ ಹಿರಿಯ) ಹಾಗೂ 15 ವರ್ಷ ಸೇವೆ ಪೂರ್ಣಗೊಳಿಸಿದವರಿಗೆ ‘ಮೋಸ್ಟ್ ಸೀನಿಯರ್’ (ಅತ್ಯಂತ ಹಿರಿಯ) ಎಂಬ ಪದನಾಮಗಳನ್ನು ನೀಡುವಂತೆ ಸಲಹೆ ನೀಡಲಾಗಿದೆ.

261109-4-617591318