ದರ ಏರಿಕೆಯಿಂದ ಜೀವನ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದ್ದು, ನಗರ ತೊರೆಯಬೇಕಾದ ಪರಿಸ್ಥಿತಿಯನ್ನು ಜನಸಾಮಾನ್ಯರು ಎದುರಿಸುತ್ತಿದ್ದಾರೆ. ಮನೆ ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಹೆಚ್ಚಳ ಒಂದೆಡೆಯಾದರೆ, ಇನ್ನೊಂದೆಡೆ ಈಗ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿದೆ. ನೀರು, ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ಬರೆ ಎಳೆಯಲಾಗಿದೆ. ರೈತರ ಹೆಸರಿನಲ್ಲಿ ಹಾಲು ಹಾಗೂ ಅದರ ಉತ್ಪನ್ನಗಳ ದರವನ್ನು ಏರಿಕೆ ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ನೂಕಲಾಗಿದೆ. ಚುನಾವಣೆಗಳಲ್ಲಿ ಜಯಿಸಲು ‘ಗ್ಯಾರಂಟಿ’ಗಳ ಆಮಿಷ ಒಡ್ಡಿ, ಅಧಿಕಾರಕ್ಕೆ ಏರಿದ ಬಳಿಕ ದರ ಏರಿಕೆ ಮಾಡುವುದು ಜನವಿರೋಧಿಯಾಗಿದೆ.
ಹಾಲು ಹಾಗೂ ಅದರ ಉತ್ಪನ್ನಗಳು ಮತ್ತು ಬಸ್ ದರವನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳೇ ಕಾರಣ. ಹಾಗಂತ ಈ ‘ಗ್ಯಾರಂಟಿ’ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ, ಪರಿಷ್ಕರಿಸುವ ಮೂಲಕ ರಾಜ್ಯ ಸರ್ಕಾರವು ತನ್ನ ಮೇಲಿನ ಹೊರೆ ಕಡಿಮೆ ಮಾಡಿಕೊಂಡು, ಏರಿಸಿದ ದರವನ್ನು ಇಳಿಸಬಹುದಾಗಿದೆ. ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಹಿಂತೆಗೆದುಕೊಂಡು, ಕೇವಲ ಬಿಪಿಎಲ್ ಕಾರ್ಡ್ದಾರರು, ಹಿರಿಯ ನಾಗರಿಕರಿಗೆ ಜಾರಿಗೊಳಿಸಬೇಕು. ಆಗ ಏರಿಕೆ ಮಾಡಿರುವ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಸಾಮಾನ್ಯ ಜನರ ಮೇಲಿನ ಹೊರೆಯೂ ಸ್ವಲ್ಪ ಕಡಿಮೆ ಮಾಡಿದಂತಾಗುತ್ತದೆ.
ಬಸ್ ಪ್ರಯಾಣ ದರ, ಹಾಲು, ಮೊಸರು, ತುಪ್ಪ, ಬೆಣ್ಣೆ, ಅಕ್ಕಿ, ಸಕ್ಕರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ, ಅದರ ಪರಿಣಾಮ ಪ್ರತಿಯೊಂದು ಕ್ಷೇತ್ರದ ಮೇಲೂ ಆಗುತ್ತದೆ. ಸಾರಿಗೆ ವೆಚ್ಚ ಹೆಚ್ಚಾದಾಗ ತರಕಾರಿ, ಹಣ್ಣು, ದಿನಸಿ ಹಾಗೂ ಕಟ್ಟಡ ಸಾಮಗ್ರಿಗಳ ಬೆಲೆಯೂ ಹೆಚ್ಚಾಗುತ್ತದೆ. ಇದರಿಂದ ಮನೆ ಬಾಡಿಗೆ, ಹೋಟೆಲ್ ಊಟ ಮತ್ತು ಇತರ ಸೇವೆಗಳ ದರಗಳೂ ಏರುತ್ತವೆ. ಕೊನೆಗೆ ಸಾಮಾನ್ಯ ಜನರ ಮಾಸಿಕ ಬಜೆಟ್ ಸಂಪೂರ್ಣ ಹದಗೆಡುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿರುವುದರಿಂದ ಜನರು ಉಳಿತಾಯ ಮಾಡುವುದೇ ಕಷ್ಟವಾಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಸಮಗ್ರ ಕ್ರಮ ಕೈಗೊಳ್ಳಬೇಕು.
ಅಬ್ದುಲ್ ರಜಾಕ್ ಮರ್ದಾಳ, ಆರ್.ಟಿ.ನಗರ
ಸರ್ಕಾರವು ವಿವಿಧ ಅಭಿವೃದ್ಧಿ ಕಾರ್ಯ, ಉದ್ಯೋಗ ಸೃಷ್ಟಿ ಸೇರಿ ವಿವಿಧ ಕ್ರಮಗಳ ಮೂಲಕ ‘ಗ್ಯಾರಂಟಿ’ ಯೋಜನೆಗಳಿಗೆ ಅನುದಾನ ಹೊಂದಿಸಲು ದಾರಿ ಕಂಡುಕೊಳ್ಳಬೇಕು. ಶ್ರಮಿಕ ವರ್ಗದವರಿಂದ ಕಿತ್ತುಕೊಂಡು, ಗ್ಯಾರಂಟಿ ಹಾಗೂ ಇನ್ನಿತರ ಫಲಾನುಭವಿಗಳ ವರ್ಗಕ್ಕೆ ಒದಗಿಸುವುದರಲ್ಲಿ ಯಾವ ಸಾಧನೆಯೂ ಕಾಣದು. ಈಗಿನ ಪ್ರಜೆಗಳು ಸುಶಿಕ್ಷಿತರು. ಎಲ್ಲವನ್ನೂ ಗ್ರಹಿಸುವ ಸೂಕ್ಷ್ಮ ಹಾಗೂ ಪ್ರಜ್ಞಾವಂತರಾಗಿದ್ದು, ಭವಿಷ್ಯದಲ್ಲಿ ತಮ್ಮ ಮತ ಚಲಾಯಿಸುವಾಗ ತಮಗಾದ ಅನ್ಯಾಯಗಳನ್ನು ಸ್ಮರಣೆಯಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಗತ್ಯ, ದಿನಬಳಕೆ ವಸ್ತುಗಳ ಏರಿಕೆ ಬಡ–ಮಧ್ಯಮ ವರ್ಗದವರಿಗೆ ನುಂಗಲಾರದ ತುತ್ತಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು, ತಜ್ಞರು, ಅನುಭವಿಗಳ ಜತೆಗೆ ಚರ್ಚಿಸುವ ಮೂಲಕ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು.
ಮಂಜುಳಾ ಜಿ., ಫ್ರೀಡಮ್ ಇಂಟರ್ನ್ಯಾಷನಲ್ ಶಾಲೆ ಶಿಕ್ಷಕಿಎಚ್.ಎಸ್.ಆರ್. ಬಡಾವಣೆ
ರಾಜ್ಯದಲ್ಲಿ ತೀವ್ರ ಬರಗಾಲ ಪರಿಸ್ಥಿತಿ ಇದೆ. ಅಕ್ಕಿ, ಜೋಳದ ದರಗಳು ದಾಖಲೆ ಮಟ್ಟದಲ್ಲಿ ಹೆಚ್ಚಾಗಿವೆ. ಇದರ ಜತೆಗೆ ದೈನಂದಿನ ಅಗತ್ಯಗಳಾದ ಹಾಲು, ಮೊಸರು ಹಾಗೂ ಸಾರ್ವಜನಿಕ ಸಾರಿಗೆಯ ಪ್ರಯಾಣ ದರವನ್ನು ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದನ್ನು ಕೇವಲ ಬೆಲೆ ಏರಿಕೆಯಲ್ಲ, ‘ಬೆಲೆ ಹೇರಿಕೆ’ ಎನ್ನಬಹುದಾಗಿದೆ. ನಮ್ಮಲ್ಲಿರುವ ಅಸಮರ್ಪಕ ನಿರ್ವಹಣೆ ಮತ್ತು ಅನಗತ್ಯ ವೆಚ್ಚಗಳಿಂದ ಸಾರಿಗೆ ಸಂಸ್ಥೆಗಳು ಸೊರಗುವಂತಾಗಿವೆ. ಈಗಿರುವ ಸಮಸ್ಯೆಗೆ ಬೆಲೆ ಏರಿಕೆಯೊಂದೇ ಪರಿಹಾರವಲ್ಲ; ವ್ಯವಸ್ಥೆಯಲ್ಲಿನ ಲೋಪಗಳನ್ನು ಹಾಗೂ ಆರ್ಥಿಕ ಸೋರಿಕೆಯನ್ನು ತಡೆಯುವುದು ಅತ್ಯಗತ್ಯ.
ಬೆಲೆ ಏರಿಕೆ ಜನಸಾಮಾನ್ಯರ ಬದುಕನ್ನೇ ದುಸ್ತರಗೊಳಿಸುತ್ತಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆ ಆಗುತ್ತಿರುವುದರಿಂದ, ಬಡ ಮತ್ತು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಲೆ ಏರಿಕೆ ಮಟ್ಟದಲ್ಲಿ ಜನರ ಸಂಬಳ ಹೆಚ್ಚಳವಾಗುತ್ತಿಲ್ಲ. ಹಾಲು ಪ್ರತಿಯೊಬ್ಬರಿಗೂ ಪ್ರತಿದಿನ ಅಗತ್ಯವಿದೆ. ಹೀಗಾಗಿ, ಹಾಲಿನ ಬೆಲೆ ಹೆಚ್ಚಿಸುವ ಮೂಲಕ ಸರ್ಕಾರ ಸುಲಭವಾಗಿ ಆದಾಯ ಸಂಗ್ರಹಿಸುವ ಅವಕಾಶ ಮಾಡಿಕೊಂಡಿದೆ. ಆದರೆ, ಇದರ ನೇರ ಹೊರೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಬೀಳುತ್ತಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆ ಹೀಗೆ ಏರಿಕೆಯಾಗುತ್ತಿದ್ದರೆ, ಸಾಮಾನ್ಯ ಜನರು ಜೀವನ ನಡೆಸುವುದಾದರೂ ಹೇಗೆ? ಬೆಲೆ ಏರಿಕೆಗೆ ಕಡಿವಾಣ ಹಾಕಿ, ಜನಸಾಮಾನ್ಯರ ಬದುಕಿಗೆ ಸರ್ಕಾರ ನೆರವಾಗಬೇಕು.
ಬಸ್ ಪ್ರಯಾಣ ದರದ ಜತೆಗೆ, ಹಾಲು ಮತ್ತು ಅದರ ಉತ್ಪನ್ನಗಳು, ಸಕ್ಕರೆ, ಅಕ್ಕಿ ಸೇರಿದಂತೆ ದಿನಬಳಕೆಯ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗುತ್ತಿದೆ. ಈ ಹೆಚ್ಚಳ ಸಾಮಾನ್ಯ ಜನರ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಬಡವರು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಜೀವನ ನಿರ್ವಹಿಸಲು ಪರದಾಡುವಂತಾಗಿದೆ. ಮಕ್ಕಳ ಶಿಕ್ಷಣ, ಆರೋಗ್ಯ, ಮನೆ ಬಾಡಿಗೆ ಹಾಗೂ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದೇ ದೊಡ್ಡ ಸವಾಲಾಗಿದೆ. ಸರ್ಕಾರ ಜನಸಾಮಾನ್ಯರ ನೋವು ಮತ್ತು ಸಂಕಷ್ಟವನ್ನು ಅರ್ಥಮಾಡಿಕೊಂಡು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಜನರ ಜೀವನಮಟ್ಟ ಸುಧಾರಿಸಲು ಸೂಕ್ತ ಕ್ರಮ ಕೈಗೊಂಡು, ಬಡ ಮತ್ತು ಮಧ್ಯಮ ವರ್ಗದವರ ಹಿತ ಕಾಪಾಡಬೇಕು. ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು.
ರಾಜಣ್ಣ ಎನ್.ಆರ್., ಜಿಯಾಲಜಿ ಲೇಔಟ್, ನಾಗರಬಾವಿ
ದುಡಿದರೂ ನೆಮ್ಮದಿಯಿಲ್ಲ, ಸಂಪಾದಿಸಿದರೂ ಉಳಿತಾಯವಿಲ್ಲ. ಜನರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು? ಒಂದು ಕಾಲದಲ್ಲಿ ಕುಟುಂಬದ ತಿಂಗಳ ಖರ್ಚಿಗೆ ಸಾಕಾಗುತ್ತಿದ್ದ ಆದಾಯ, ಇಂದು ಹತ್ತು ದಿನಗಳ ಜೀವನ ನಿರ್ವಹಣೆಗೂ ಸಾಲದಂತಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ, ಸಾಮಾನ್ಯ ಜನರ ಬದುಕನ್ನು ಸಂಕಷ್ಟದ ಸುಳಿಗೆ ತಳ್ಳಿದೆ. ದುಡಿಯುವ ಕೈಗಳಿಗೆ ಕೆಲಸವಿದ್ದರೂ, ದುಡಿಮೆಗೆ ತಕ್ಕ ಆದಾಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಅಕ್ಕಿ, ಬೇಳೆ, ಅಡುಗೆ ಎಣ್ಣೆ, ತರಕಾರಿ, ಹಾಲು, ಮೊಸರು ಇತರೆ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರ ಅಡುಗೆ ಮನೆಯನ್ನೇ ಕಂಗೆಡಿಸಿದೆ. ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ಆಸ್ಪತ್ರೆ ವೆಚ್ಚ, ಸಾರಿಗೆ ವೆಚ್ಚ ಹೀಗೆ ಪ್ರತಿಯೊಂದು ಖರ್ಚೂ ಹೆಚ್ಚಾಗುತ್ತಲೇ ಇದೆ. ಆದರೆ, ಸಾಮಾನ್ಯ ಕಾರ್ಮಿಕನ ಸಂಬಳ ಮಾತ್ರ ಅದೇ ಮಟ್ಟದಲ್ಲಿ ಉಳಿದಿದೆ. ಇದು ಕೇವಲ ಬೆಲೆ ಏರಿಕೆಯಲ್ಲ, ಸರ್ಕಾರಗಳು ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಮಾಡುತ್ತಿರುವ ಆರ್ಥಿಕ ಹೊಡೆತವಾಗಿದೆ.







261109-4-968093542

