ಬೆಂಗಳೂರು: ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣದ ಪ್ರಕರಣದ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ‘ಕೇಂದ್ರ ಸರ್ಕಾರ ಈ ವಿಚಾರದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ‘ಆದರೆ ಇದರ ಪ್ರಯೋಗಕ್ಕೆ ಸರಿಯಾದ ಪ್ರಯೋಗಾಲಯವೇ ರಾಜ್ಯದಲ್ಲಿ ಇಲ್ಲ’ ಎಂದು ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ.
ಶಿವಕುಮಾರ್ ಅವರು ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ಪೆಟ್ರೋಲ್‌ನಲ್ಲಿ ಶೇ 31.5ರಷ್ಟು ಎಥೆನಾಲ್ ಮಿಶ್ರಣ ಮಾಡುತ್ತಿರುವ ಬಗ್ಗೆ ಬಂದಿರುವ ದೂರುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ’ ಹೇಳಿದರು.
‘ವಾಹನ ಇಂಧನಗಳಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣ ಹೆಚ್ಚಳದಿಂದ ವಾಹನಗಳ ಎಂಜಿನ್ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂಬ ದೂರುಗಳು ಬಂದ ಕಾರಣ ರಾಜ್ಯದ 67 ಕಡೆ ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗಿದೆ’ ಎಂದರು.
‘ಪೆಟ್ರೋಲ್ ಬಂಕ್‌ಗಳಲ್ಲಿ ಮಾತ್ರವಲ್ಲದೆ, ಎಥೆನಾಲ್ ಮಿಶ್ರಣ ಮತ್ತು ವಿತರಣೆಯಾಗುವ ಹಂತದಲ್ಲೂ ಪರಿಶೀಲನೆ ನಡೆಸಲಾಗಿದೆ. ಎಲ್ಲಿ, ಹೇಗೆ ಮಿಶ್ರಣ ಮಾಡಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಸಂಗ್ರಹಿಸಲಾಗಿದೆ. ಕೇಂದ್ರ ಸರ್ಕಾರಕ್ಕೂ ಮಾಹಿತಿ ರವಾನಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು ಪರಿಶೀಲನಾ ವರದಿ ಹಾಗೂ ಮುಂದಿನ ಕ್ರಮಗಳ ಬಗ್ಗೆ ಸೋಮವಾರ (ನ.9) ಮಾಹಿತಿ ನೀಡಲಿದ್ದಾರೆ’ ಎಂದರು.
‘ಸಾವಿರಾರು ವಾಹನ ಸವಾರರು ವಾಹನಗಳ ಮೈಲೇಜ್ ಕಡಿಮೆಯಾಗುವುದು, ನಿರೀಕ್ಷಿತ ದೂರ ಕ್ರಮಿಸದಿರುವುದು ಹಾಗೂ ಚಲಿಸುತ್ತಿರುವಾಗಲೇ ಎಂಜಿನ್ ಸ್ಥಗಿತಗೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ದೂರು ನೀಡಿದ್ದಾರೆ. ಕಡಿಮೆ ಬೆಲೆಗೆ ಎಥೆನಾಲ್ ದೊರೆಯುತ್ತದೆ ಎಂಬ ಕಾರಣಕ್ಕೆ ಅದರಿಂದ ಲಾಭ ಪಡೆಯುವ ಉದ್ದೇಶದಿಂದ ಮಿಶ್ರಣದ ಪ್ರಮಾಣ ಹೆಚ್ಚಿಸುವುದು ಸರಿಯಲ್ಲ. ವಾಹನಗಳ ಕಾರ್ಯಕ್ಷಮತೆ, ಇಂಧನದ ಗುಣಮಟ್ಟ ಹಾಗೂ ಜನರ ಸುರಕ್ಷತೆ ಮುಖ್ಯ. ಜನರಿಗೆ ತೊಂದರೆ ಉಂಟುಮಾಡುವುದು ಒಳ್ಳೆಯದಲ್ಲ. ಇಡೀ ದೇಶದ ವಾಹನ ಸವಾರರಲ್ಲಿ ಆತಂಕ ಮೂಡಿಸಿರುವ ವಿಚಾರ ಇದು. ಇಂತಹ ಅಪಾಯಕಾರಿ ಪರಿಸ್ಥಿತಿಯನ್ನು ನಾವು ಖಂಡಿಸುತ್ತೇವೆ’ ಎಂದರು.
‘ಈ ಬಗ್ಗೆ ಬಿಜೆಪಿ, ಜೆಡಿಎಸ್ ನಾಯಕರು ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ ಏಕೆ ಮಾತನಾಡುತ್ತಿಲ್ಲ? ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಎಲ್ಲರೂ ಧ್ವನಿ ಎತ್ತಬೇಕು’ ಎಂದರು.
ನಮ್ಮಲ್ಲಿ ಪರೀಕ್ಷೆಯ ಲ್ಯಾಬ್ ಎಲ್ಲಿದೆ: ಅಶೋಕ ಪ್ರಶ್ನೆ
‘ಪೆಟ್ರೋಲ್– ಎಥೆನಾಲ್ ಮಿಶ್ರಣದ ಪರೀಕ್ಷೆ ಮಾಡುವ ಅತ್ಯಾಧುನಿಕ ಪ್ರಯೋಗಾಲಯ ನಮ್ಮಲ್ಲಿ ಎಲ್ಲೂ ಇಲ್ಲ. ಆದ್ದರಿಂದ ಸರಿಯಾಗಿ ಎಷ್ಟು ಪ್ರಮಾಣದಲ್ಲಿ ಮಿಶ್ರಣ ಮಾಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
‘ರಾಜ್ಯ ಸರ್ಕಾರ ಎಲ್ಲಿಂದ ಮಾದರಿಗಳನ್ನು ಪಡೆದಿದೆ? ಪೆಟ್ರೋಲ್ ಬಂಕ್‌ನವರೇ ಅದನ್ನು ಮಿಶ್ರಣ ಮಾಡಿರಲೂ ಬಹುದು. ಕೂಡಲೇ ದಾಖಲೆಗಳನ್ನು ಬಿಡುಗಡೆ ಮಾಡಲಿ’ ಎಂದು ಅವರು ಒತ್ತಾಯಿಸಿದರು.
‘ರಾಜ್ಯದಲ್ಲಿ ಹಾಲು, ಅಕ್ಕಿ ಇತ್ಯಾದಿಗಳ ಕಲಬೆರಕೆ ನಡೆಯುತ್ತಿದೆ. ಮೊದಲು ಇದನ್ನು ಸರ್ಕಾರ ಪರಿಶೀಲಿಸಬೇಕು. ಕೇಂದ್ರ ಸರ್ಕಾರ ಪೆಟ್ರೋಲ್ ಖರೀದಿಯ ಮೇಲಿನ ಹೊರೆ ತಗ್ಗಿಸಲು, ವಿದೇಶಿ ವಿನಿಮಯ ಉಳಿತಾಯ ಮಾಡಲು ಎಥೆನಾಲ್ ಅನ್ನು ವೈಜ್ಞಾನಿಕವಾಗಿ ಮಿಶ್ರಣ ಮಾಡಲು ಕ್ರಮ ವಹಿಸಿದೆ. ಇದರ ಮೇಲೆ ಆರೋಪ ಮಾಡುವ ಮೊದಲು ನಮ್ಮಲ್ಲಿ ನಡೆಯುತ್ತಿರುವ ಕಲಬೆರಕೆಯನ್ನು ನೋಡಲಿ’ ಎಂದು ಹೇಳಿದರು.
‘ಕೇಂದ್ರದ ಎಡವಟ್ಟುಗಳೇ ಕಾರಣ’
‘ಎಥೆನಾಲ್ ಸಂಬಂಧಿಸಿದಂತೆ ಈಗಿನ ಸಮಸ್ಯೆಗೆ ಕೇಂದ್ರ ಸರ್ಕಾರದ ಎಡವಟ್ಟುಗಳೇ ಕಾರಣ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
‘ಎಥೆನಾಲ್ ಉತ್ಪಾದನೆಗೆ ಅಗತ್ಯಕ್ಕಿಂತ ಹೆಚ್ಚು ಒತ್ತು ನೀಡಿದ ಕೇಂದ್ರದ ಬಿಜೆಪಿ ಸರ್ಕಾರವು, ಉತ್ಪಾದಿತ ಎಥೆನಾಲ್‌ನಲ್ಲಿ ಶೇ 20ರಿಂದ 30ರಷ್ಟನ್ನೂ ಖರೀದಿಸುವುದಿಲ್ಲ. ಇದರ ಹಿಂದೆ ಅವ್ಯವಹಾರ ನಡೆದಿದೆ ಎನ್ನುವ ರಾಹುಲ್ ಗಾಂಧಿ ಮತ್ತು ಸಚಿವ ರಿಜ್ವಾನ್ ಅರ್ಷದ್ ಆರೋಪದಲ್ಲಿ ಸತ್ಯಾಂಶವಿದೆ’ ಎಂದರು.
‘ಎಥೆನಾಲ್ ವಿಚಾರದಲ್ಲಿ ಕೇಂದ್ರ ಸರ್ಕಾರ ಎಲ್ಲವನ್ನೂ ಗಬ್ಬೆಬ್ಬಿಸಿದೆ. ಮನಸ್ಸಿಗೆ ಬಂದಂತೆ ಇ-10, ಇ-20, ಇ-30 ಎಂದೆಲ್ಲ ಹೇಳುತ್ತಿದ್ದಾರೆ. ಮೊದಲು ಉತ್ಪಾದನೆ ಮಾಡುವಂತೆ ಹೇಳಿದ ಮೇಲೆ ಅದನ್ನು ಖರೀದಿಸಬೇಕು. ಉತ್ಪಾದಿತ ಎಥೆನಾಲನ್ನು ಕೈಗಾರಿಕೆಯವರು ಏನು ಮಾಡಬೇಕೆನ್ನುವ ಪ್ರಶ್ನೆ ಬರುತ್ತದೆ’ ಎಂದು ಟೀಕಿಸಿದರು.
ಎಥೆನಾಲ್ ಪರೀಕ್ಷೆಗೆ ಮುಂದಾದ ಕೇರಳ ಸರ್ಕಾರ
ತಿರುವನಂತಪುರ: ಕರ್ನಾಟಕದ ಬಳಿಕ ಇದೀಗ ಕೇರಳಂ ಸರ್ಕಾರವು, ಪೆಟ್ರೋಲ್‌ನಲ್ಲಿನ ಎಥೆನಾಲ್ ಅಂಶದ ಪತ್ತೆಗೆ ಪರೀಕ್ಷೆ ನಡೆಸಲು ಮುಂದಾಗಿದೆ.
ಕೇರಳಂನ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಅನೂಪ್ ಜಾಕೊಬ್ ಅವರು ಈ ಬಗ್ಗೆ ನಿರ್ದೇಶನ ನೀಡಿದ್ದಾರೆ.
‘ವಿವಿಧ ಜಿಲ್ಲೆಗಳ 20 ಸ್ಥಳಗಳಿಂದ ಸೋಮವಾರದಿಂದ ಪೆಟ್ರೋಲ್ ಮಾದರಿ ಸಂಗ್ರಹಣೆ ನಡೆಯಲಿದೆ. ಈ ಬಗ್ಗೆ ಸಚಿವ ಅನೂಪ್ ಅವರು ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರ ಜೊತೆ ಚರ್ಚೆ ನಡೆಸಿದ್ದಾರೆ ಮತ್ತು 20 ಶೇಕಡಕ್ಕಿಂತ ಅಧಿಕ ಎಥೆನಾಲ್ ಹೊಂದಿದ ಪೆಟ್ರೋಲ್ ಮಾರಾಟ ಮಾಡುವ ಪೆಟ್ರೋಲ್ ಬಂಕ್‌ಗಳ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
‘ಕರ್ನಾಟಕದಲ್ಲಿ ಶೇ 31.2ಕ್ಕೂ ಅಧಿಕ ಪ್ರಮಾಣದ ಎಥೆನಾಲ್ ಅಂಶವಿರುವ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತಿರುವುದು ಇಲ್ಲಿನ ಸರ್ಕಾರ ನಡೆಸಿದ ಪರೀಕ್ಷೆಯ ವೇಳೆ ಪತ್ತೆಯಾಗಿದೆ. ಇ20 ಪೆಟ್ರೊಲ್ ಬಳಕೆಯಿಂದಾಗಿ ವಾಹನಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ’ ಎಂಬ ಆರೋಪಗಳು ಕೇಳಿಬರುತ್ತಿವೆ.
ಪರೀಕ್ಷೆ ನಡೆಸಲು ಮುಕ್ತ ಅವಕಾಶವಿದೆ
ಪೆಟ್ರೋಲ್‌ನಲ್ಲಿನ ಎಥೆನಾಲ್ ಪ್ರಮಾಣದ ಬಗ್ಗೆ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಮುಕ್ತ ಅವಕಾಶವಿದೆ. ಆದರೆ, ಈ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಅವರು ಭಾನುವಾರ ಹೇಳಿದ್ದಾರೆ.
‘ಕರ್ನಾಟಕ ಸರ್ಕಾರ ಅಥವಾ ಕೇರಳಂ ಸರ್ಕಾರ ಪರೀಕ್ಷೆ ನಡೆಸಲಿ. ಅದಕ್ಕೆ ನಮ್ಮ ಸಹಕಾರವಿದೆ. ಎಥೆನಾಲ್ ಮಿಶ್ರಣ ನೀತಿ ಬಗ್ಗೆ ಕೇಂದ್ರ ಸರ್ಕಾರವು ವೈಜ್ಞಾನಿಕ ಆಧಾರವನ್ನು ಹೊಂದಿದೆ’ ಎಂದು ಸಮರ್ಥಿಸಿಕೊಂಡರು.
‘ರಾಜಕೀಯ ಉದ್ದೇಶಗಳಿಗಾಗಿ ಜನರು ಅನಗತ್ಯ ಕೆಸರೆರಚಾಟದಲ್ಲಿ ತೊಡಗಿ ವಿವಾದಗಳನ್ನು ಸೃಷ್ಟಿಸಿದರೆ ಅದರಿಂದ ಅಂತಿಮವಾಗಿ ಯಾರಿಗೆ ತೊಂದರೆಗಳಾಗುತ್ತವೆ ಎಂಬುವುದನ್ನು ನಾವು ನೋಡಬೇಕಷ್ಟೆ’ ಎಂದು ಆರೋಪಗಳಿಗೆ ತಿರುಗೇಟು ನೀಡಿದರು.

