ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಯೋಜನೆಗಳ ಪ್ರಗತಿ ಪರಿಶೀಲನೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ (ನ. 9) ನಡೆಸಲಿದ್ದು, ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜೊತೆಗೆ ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ, ವ್ಯವಸ್ಥಿತ ನಗರೀಕರಣ ಹಾಗೂ ದಶಕಗಳಿಂದ ಬಾಕಿ ಉಳಿದಿರುವ ನಾಗರಿಕರ ನಿವೇಶನ ಮತ್ತು ವಸತಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬಿಡಿಎ ಮಹತ್ವಾಕಾಂಕ್ಷಿಯ ಯೋಜನೆಗಳ ಸಮಗ್ರ ಪ್ರಗತಿ ಪರಿಶೀಲನೆಯನ್ನು ಮುಖ್ಯಮಂತ್ರಿ ನಡೆಸಲಿದ್ದಾರೆ. ಜನಸಾಮಾನ್ಯರಿಗೆ ಅನುಕೂಲವಾಗುವ ಹಾಗೂ ಸಿಲಿಕಾನ್ ಸಿಟಿಯ ಮೂಲಸೌಕರ್ಯದ ಚಿತ್ರಣವನ್ನೇ ಬದಲಿಸಬಲ್ಲ ಪ್ರಮುಖ ಯೋಜನೆಗಳ ಕುರಿತು ಬಿಡಿಎ ಅಧಿಕಾರಿಗಳ ಜೊತೆ ಅವರು ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಡಿಎ ಭೂಸ್ವಾಧೀನ ಮಾಡಿಕೊಂಡ ಜಾಗಗಳಲ್ಲಿ 12 ವರ್ಷಗಳ ಹಿಂದೆ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಶುಲ್ಕದಲ್ಲಿ ಶೇ 50ರಷ್ಟು ರಿಯಾಯಿತಿ ನೀಡಿ ಸರ್ಕಾರ ಈಗಾಗಲೇ ಅಧಿಸೂಚನೆ ಹೊರಡಿಸಿದೆ. 20x30 ವಿಸ್ತೀರ್ಣದ ನಿವೇಶನಕ್ಕೆ ಈ ಹಿಂದೆ ಶೇ 10ರಷ್ಟು ಇದ್ದ ಶುಲ್ಕವನ್ನು ಶೇ 5, 30x40 ವಿಸ್ತೀರ್ಣದ ನಿವೇಶನಕ್ಕೆ ಶೇ 25ರ ಬದಲು ಶೇ 12.5, 40x60 ವಿಸ್ತೀರ್ಣದ ನಿವೇಶನಕ್ಕೆ ಶೇ 40ರ ಬದಲು ಶೇ 20, 40x60 ರಿಂದ 50x80 ವಿಸ್ತೀರ್ಣದವರೆಗಿನ ನಿವೇಶನಕ್ಕೆ ಶೇ 50ರ ಬದಲು ಶೇ 25 ಮತ್ತು ದಂಡ ವಿಧಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕೃತಗೊಳಿಸುವ ವ್ಯವಸ್ಥೆಗೆ ಮುಖ್ಯಮಂತ್ರಿ ಚಾಲನೆ ನೀಡುವ ಸಾಧ್ಯತೆ ಇದೆ.
ಬಿಡಿಎ ಯೋಜನೆಗಳ ಪ್ರಸ್ತುತ ಸ್ಥಿತಿ, ಅನುಷ್ಠಾನದ ವೇಗ, ಭೂಸ್ವಾಧೀನದ ಪ್ರಗತಿ, ಆರ್ಥಿಕ ಹಾಗೂ ಆಡಳಿತಾತ್ಮಕ ಅಂಶಗಳು ಮತ್ತು ನಿಗದಿತ ಕಾಲಮಿತಿಯ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಲಿದ್ದಾರೆ. ಅಲ್ಲದೆ, ಬಿಡಿಎ ವತಿಯಿಂದ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.
