ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ್ ತಂಡದ ಫೀಲ್ಡಿಂಗ್ ಎಡವಟ್ಟುಗಳು ಜಗತ್ಪ್ರಸಿದ್ಧ. 2008ರಲ್ಲಿ ಸಯೀದ್ ಅಜ್ಮಲ್ ಮತ್ತು ಶೋಯೆಬ್ ಮಲಿಕ್ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡುತ್ತಾ ಕ್ಯಾಚ್ ಕೈಬಿಟ್ಟ ದೃಶ್ಯವನ್ನು ಕ್ರಿಕೆಟ್ ಅಭಿಮಾನಿಗಳು ಇಂದಿಗೂ ಮರೆತಿಲ್ಲ. ಈಗ ಅಂತಹದ್ದೇ ಮತ್ತೊಂದು ನಗುವಿನ ಅಲೆ ಎಬ್ಬಿಸುವ ಘಟನೆ 2026ರ U19 ಏಷ್ಯಾ ಕಪ್‌ನಲ್ಲಿ ಮರುಕಳಿಸಿದೆ. ಭಾರತ ಮತ್ತು ಪಾಕಿಸ್ತಾನ್ ಕಿರಿಯರ ತಂಡಗಳ ನಡುವಿನ ಹೈ-ವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನದ ಮೂವರು ಫೀಲ್ಡರ್‌ಗಳು ಸೇರಿ ಅಕ್ಷರಶಃ ‘ಕಾಮಿಡಿ ಆಫ್ ಎರರ್ಸ್’ ಪ್ರದರ್ಶಿಸಿದ್ದಾರೆ!

ಮೈದಾನದಲ್ಲಿ ನಡೆದಿದ್ದೇನು?

“ಈ ತಮಾಷೆಯ ಘಟನೆ ಜರುಗಿದ್ದು ಭಾರತದ ಇನ್ನಿಂಗ್ಸ್‌ನ 44ನೇ ಓವರ್‌ನಲ್ಲಿ. ಆಗ ಭಾರತ ತಂಡ 201 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಪಾಕ್ ಬೌಲರ್ ಮೊಹಮ್ಮದ್ ಸಯ್ಯಮ್ ಎಸೆದ ಲೆಂತ್ ಡೆಲಿವರಿಯನ್ನು ಸಿಕ್ಸರ್‌ಗೆ ಅಟ್ಟಲು ಭಾರತದ ಕೆಳ ಕ್ರಮಾಂಕದ ಬ್ಯಾಟರ್ ಕಾವ್ಯ ಪಟೇಲ್ ಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ನ ಮೇಲ್ಭಾಗಕ್ಕೆ ಬಡಿದು ಆಕಾಶಕ್ಕೆ ಚಿಮ್ಮಿತು. ಅಂತಿಮ ವಿಕೆಟ್ ಪಡೆದು ಭಾರತದ ಇನ್ನಿಂಗ್ಸ್ ಮುಗಿಸಲು ಪಾಕಿಸ್ತಾನಕ್ಕೆ ಇದು ಸುವರ್ಣ ಅವಕಾಶವಾಗಿತ್ತು.

ಮೂವರು ಫೀಲ್ಡರ್‌ಗಳ ದಂಡು:

ಚೆಂಡನ್ನು ಕ್ಯಾಚ್ ಹಿಡಿಯಲು ಬೌಲರ್ ಮೊಹಮ್ಮದ್ ಸಯ್ಯಮ್, ವಿಕೆಟ್‌ಕೀಪರ್ ಹಮ್ಜಾ ಜಹೂರ್ ಮತ್ತು ಫೀಲ್ಡರ್ ಉಸ್ಮಾನ್ ಖಾನ್ ಮೂವರೂ ಏಕಕಾಲಕ್ಕೆ ಓಡಿ ಬಂದರು.

ಮೂವರೂ ಚೆಂಡಿನ ಕೆಳಗೆ ಸರಿಯಾಗಿಯೇ ಬಂದು ನಿಂತಿದ್ದರು. ಆದರೆ ಅವರ ನಡುವೆ ಯಾವುದೇ ಸಂವಹನ ಇರಲಿಲ್ಲ. ‘ನಾನು ಹಿಡಿಯುತ್ತೇನೆ’ ಎಂದು ಯಾರೊಬ್ಬರೂ ಧ್ವನಿ ಮಾಡಲಿಲ್ಲ.

ಕೊನೆಯ ಕ್ಷಣದಲ್ಲಿ ಮೂವರೂ ಆಟಗಾರರು ಒಬ್ಬರನ್ನೊಬ್ಬರು ಡಿಕ್ಕಿ ಹೊಡೆಯುವ ಭಯದಿಂದ ಹಿಂದಕ್ಕೆ ಸರಿದರು. ಪರಿಣಾಮವಾಗಿ, ಅತ್ಯಂತ ಸುಲಭವಾದ ಆ ಕ್ಯಾಚ್ ಮೂವರ ಮಧ್ಯೆ ಬಿತ್ತು!

Pakistan Cricket Heritage 🤣🤣🤣😭😭 https://t.co/1adOVqjVoX

— Sunny (@Cricketkibaat01) November 8, 2026

ಇದನ್ನು ಕಂಡು ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಮತ್ತು ಭಾರತೀಯ ಡಗೌಟ್‌ನಲ್ಲಿದ್ದ ಆಟಗಾರರು ನಗೆಗಡಲಲ್ಲಿ ತೇಲಿದರು. ಇತ್ತ ವಿಕೆಟ್ ಸಿಗಬೇಕಾದ ಜಾಗದಲ್ಲಿ ಬ್ಲಂಡರ್ ಆದದ್ದನ್ನು ಕಂಡು ಬೌಲರ್ ಸಯ್ಯಮ್ ಮೈದಾನದಲ್ಲೇ ಸಹ ಆಟಗಾರರ ವಿರುದ್ಧ ರೊಚ್ಚಿಗೆದ್ದರು. ಇದೀಗ ಈ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪಾಕ್ ಆಟಗಾರರು ಟ್ರೋಲ್​​ಗೆ ಒಳಗಾಗಿದ್ದಾರೆ.

ಇದನ್ನೂ ಓದಿ: ಅಭಿಷೇಕ್ ದಾಖಲೆ ಧೂಳೀಪಟ… ಮಿಚೆಲ್ ಓವನ್ ಹೊಸ ವಿಶ್ವ ದಾಖಲೆ

ಮ್ಯಾಚ್​​ನಲ್ಲಿ ಗೆದ್ದಿದ್ದು ಯಾರು?

ಈ ಜೀವದಾನದ ನೆರವಿನಿಂದ ಭಾರತ ತಂಡ ಅಂತಿಮವಾಗಿ 208 ರನ್ ತಲುಪಿತು. ಆದರೆ, ಪಾಕಿಸ್ತಾನ ತಂಡಕ್ಕೆ ಮೈದಾನದಲ್ಲಿ ಆದ ಅವಮಾನವನ್ನು ಅದೇ ವಿಕೆಟ್‌ಕೀಪರ್ ಹಮ್ಜಾ ಜಹೂರ್ ಬ್ಯಾಟಿಂಗ್‌ನಲ್ಲಿ ಬಡ್ಡಿ ಸಮೇತ ತೀರಿಸಿದರು. ಕ್ಯಾಚ್ ಕೈಬಿಟ್ಟು ವಿಲನ್ ಆಗಿದ್ದ ಹಮ್ಜಾ, ನಂತರ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಭರ್ಜರಿ ಶತಕ ಸಿಡಿಸಿದರು. ಅವರ ಅಜೇಯ ಶತಕದ ನೆರವಿನಿಂದ ಪಾಕಿಸ್ತಾನ್ U19 ತಂಡ 3 ವಿಕೆಟ್‌ಗಳ ರೋಮಾಂಚಕ ಜಯ ಸಾಧಿಸಿತು. ಪಂದ್ಯ ಗೆದ್ದರೂ ಸಹ, ಆ ಮೂವರ ಫೀಲ್ಡಿಂಗ್ ಕಾಮಿಡಿ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.