ಲಂಡನ್‌: ಐಸಿಸಿ(ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌) ಅನುದಾನ ತಡೆ ಹಿಡಿದಿರುವುದು ಹಾಗೂ ಮುಂದಿನ ವರ್ಷ ಭಾರತ ತಂಡ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳದೇ ಇರುವುದರಿಂದ 2027ರಲ್ಲಿ ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ)ಗೆ ₹627 ಕೋಟಿ ರು. ನಷ್ಟವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

2025ರಲ್ಲಿ ಇಸಿಬಿ ಸುಮಾರು ₹160 ಕೋಟಿ ಲಾಭ ಗಳಿಸಿತ್ತು. ಆದರೆ ಮುಂದಿನ ವರ್ಷ ಮಂಡಳಿಗೆ ತೀವ್ರ ನಷ್ಟ ಉಂಟಾಬಹುದು ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

2028ಕ್ಕೆ ಆದಾಯ ಕುಸಿಯುವ ಭೀತಿಯಿಂದ ಐಸಿಸಿ ತನ್ನ 12 ಪೂರ್ಣ ಸದಸ್ಯತ್ವ ರಾಷ್ಟ್ರಗಳಿಗೆ 2027ರಲ್ಲಿ ಹಂಚಿಕೆ ಮಾಡಬೇಕಿದ್ದ ಪ್ರಸಾರ ಆದಾಯದ ಪಾಲಿನಲ್ಲಿ ಒಂದು ಭಾಗವನ್ನು ತಡೆಹಿಡಿಯಲು ನಿರ್ಧರಿಸಿದೆ. ಆದರೆ ಎಷ್ಟು ಮೊತ್ತ ಎನ್ನುವುದು ಖಚಿತವಾಗಿಲ್ಲ. ಇದರ ಜತೆಗೆ ಮುಂದಿನ ವರ್ಷ ಇಂಗ್ಲೆಂಡ್‌ ನೆಲದಲ್ಲಿ ಟೀಂ ಇಂಡಿಯಾ ಯಾವುದೇ ಸರಣಿ ಆಡುತ್ತಿಲ್ಲ. ಹೀಗಾಗಿ ಪಂದ್ಯಗಳಿಂದ ಲಭಿಸುವ ಅಪಾರ ಪ್ರಮಾಣದ ಜಾಹೀರಾತು ಮತ್ತು ವೀಕ್ಷಕರ ಸಂಖ್ಯೆ ತಪ್ಪಿ ಹೋಗಲಿದೆ. ಬೇಸಿಗೆ ಋತುವಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್‌ ಸರಣಿ ಆಯೋಜಿಸಿದರೂ, ಭಾರತ ವಿರುದ್ಧ ಸರಣಿ ಇಲ್ಲದೇ ಇರುವುದರಿಂದಾಗಿ ಇಂಗ್ಲೆಂಡ್‌ಗೆ ನಷ್ಟವಾಗಲಿದೆ ಎಂದೇ ಅಂದಾಜಿಸಲಾಗಿದೆ.

ಕೌಂಟಿ ಕ್ರಿಕೆಟ್‌ ಮೇಲೂ ಆರ್ಥಿಕ ಹೊಡೆತದ ಆತಂಕ

ಇಸಿಬಿ ಎದುರಿಸಬಹುದಾದ ಆರ್ಥಿಕ ನಷ್ಟಗಳು ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್‌ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಇಂಗ್ಲೆಂಡ್‌ನ 18 ಕೌಂಟಿಗಳ ಪೈಕಿ ಈಗಾಗಲೇ 10 ಕೌಂಟಿಗಳು ನಷ್ಟದಲ್ಲಿವೆ ಎಂದು ವರದಿಯಾಗಿದೆ.

ಕೌಂಟಿ ತಂಡಗಳು ತಮ್ಮ ಆದಾಯದ ಬಹುಪಾಲು ಭಾಗಕ್ಕೆ ಇಸಿಬಿಯನ್ನೇ ಅವಲಂಬಿಸಿವೆ. ಹೀಗಾಗಿ, ಮಂಡಳಿಯ ಆದಾಯ ಕಡಿಮೆಯಾದರೆ ಕೌಂಟಿಗಳಿಗೂ ಅನುದಾನ ಮತ್ತು ಆರ್ಥಿಕ ನೆರವಿನ ಕೊರತೆ ಎದುರಾಗಬಹುದು. ಪರಿಣಾಮವಾಗಿ, ಮುಂದಿನ ವರ್ಷ ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್‌ ವ್ಯವಸ್ಥೆಯೇ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.

ರೈಸಿಂಗ್‌ ಸ್ಟಾರ್ಸ್‌ ಏಷ್ಯಾಕಪ್‌: ರಜತ್‌ ಪಾಟೀದಾರ್ ಹೊರಕ್ಕೆ, ಆಯುಶ್‌ಗೆ ಸ್ಥಾನ

ನವದೆಹಲಿ: ನ.19ರಿಂದ 29ರ ವರೆಗೆ ಕತಾರ್‌ನ ದೋಹಾದಲ್ಲಿ ನಡೆಯಲಿರುವ ಎಸಿಸಿ ರೈಸಿಂಗ್ ಸ್ಟಾರ್ಸ್‌ ಏಷ್ಯಾಕಪ್‌ ಟೂರ್ನಿಯ ಭಾರತ ತಂಡದಿಂದ ಉಪನಾಯಕ ರಜತ್‌ ಪಾಟೀದಾರ್ ಹೊರಬಿದ್ದಿದ್ದಾರೆ. ಅವರು ಗಾಯದಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಟೂರ್ನಿಗೆ ಪರಿಗಣಿಸಬಾರದಾಗಿ ಬಿಸಿಸಿಐಗೆ ರಜತ್‌ ಕೋರಿದ್ದರು. ಸದ್ಯ ಬಿಸಿಸಿಐ ಹೊಸ ತಂಡವನ್ನು ಪ್ರಕಟಿಸಿದ್ದು, ರಜತ್‌ ಬದಲು ಆಯುಶ್‌ ಬದೋನಿಗೆ ಸ್ಥಾನ ಕಲ್ಪಿಸಿದೆ. ತಾರಾ ಆಟಗಾರ ರಿಂಕು ಸಿಂಗ್‌ ಅವರನ್ನು ಉಪನಾಯಕನನ್ನಾಗಿ ನೇಮಿಸಿದೆ. ತಂಡವನ್ನು ತಿಲಕ್‌ ವರ್ಮಾ ಮುನ್ನಡೆಸಲಿದ್ದು, ನ.20ರಂದು ನೇಪಾಳ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.