ಬೆಂಗಳೂರು: ಬಜೆಟ್‌ನಲ್ಲಿ ಘೋಷಿಸಿರು ವಂತೆ ನಗರದಲ್ಲಿ 88 ರಸ್ತೆಗಳ 130.85 ಕಿ.ಮೀ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ₹2,321.17 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಬಿ–ಸ್ಮೈಲ್‌ ವತಿಯಿಂದ ಹೊಸ ವೈಟ್‌ ಟಾಪಿಂಗ್‌ ಕಾಮಗಾರಿಗಳನ್ನು 12 ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಶವಂತಪುರದಿಂದ ಹಳೆ ಮದ್ರಾಸ್ ರಸ್ತೆ ಹಾಗೂ ಮಾರೇನಹಳ್ಳಿ ಮುಖ್ಯರಸ್ತೆಯಿಂದ ಕನಕಪುರ ಮುಖ್ಯರಸ್ತೆಯವರೆಗಿನ ಎಲಿವೇಟೆಡ್‌ ಕಾರಿಡಾರ್‌ಗಳ ನಿಧಿ ರಚನೆಯನ್ನು ಮಾರ್ಪಾಟು ಮಾಡಲಾಗಿದ್ದು, ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಹಣವನ್ನು ರಾಜ್ಯ ಸರ್ಕಾರ ಮತ್ತು ಬೆಂಗಳೂರು ನಗರ ಪಾಲಿಕೆಗಳ ಮೂಲಕ ಸಮಾನವಾಗಿ ಭರಿಸಲಿವೆ.

ಬೆಂಗಳೂರಿನ ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 71ರಲ್ಲಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಶಾಖೆ ಆರಂಭಿಸಿ, ಹೃದ್ರೋಗ ಚಿಕಿತ್ಸಾ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಲಾಗಿದೆ.

ಬಿ–ಸ್ಮೈಲ್ ವತಿಯಿಂದ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರ ಮೆಟ್ರೊ ನಿಲ್ದಾಣದವರೆಗಿನ ಮಾರ್ಗ ಹಾಗೂ ಹೊರವರ್ತುಲ ರಸ್ತೆಯನ್ನು ಜಾಗತಿಕ ಮಟ್ಟದಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸುವ ಯೋಜನೆಗೆ ₹486.79 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ಶೇ 50ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಹಾಗೂ ಉಳಿದ ಶೇ 50ರಷ್ಟು ವೆಚ್ಚವನ್ನು ಬೆಂಗಳೂರು ನಗರ ಪಾಲಿಕೆಗಳು ಭರಿಸಲಿವೆ ಎಂದು ಹೇಳಿದರು.

ವಿನಾಯಿತಿ ರದ್ದು: ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಸ್ಟಾರ್ ಹೋಟೆಲ್‌ಗಳಿಗೆ ನೀಡಲಾಗಿದ್ದ ಆಸ್ತಿ ತೆರಿಗೆ ವಿನಾಯಿತಿ ಹಾಗೂ ಆಸ್ತಿ ತೆರಿಗೆ ಉದ್ದೇಶಕ್ಕಾಗಿ ಕೈಗಾರಿಕಾ ವರ್ಗೀಕರಣದ ಸೌಲಭ್ಯವನ್ನು ಹಿಂಪಡೆಯಲು ಸಂಪುಟ ಸಭೆ ನಿರ್ಧರಿಸಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು 2021ರ ಮಾರ್ಚ್ 4ರಂದು ಹೊರಡಿಸಿದ್ದ ಸರ್ಕಾರದ ಆದೇಶವನ್ನು, ಆ ದಿನಾಂಕ ದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

2021ರಲ್ಲಿ ಬೆಂಗಳೂರಿನ ಸ್ಟಾರ್ ಹೋಟೆಲ್‌ಗಳಿಗೆ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡಲಾಗಿತ್ತು. ಆದರೆ, ನಗರ ಪಾಲಿಕೆಗಳ ಆದಾಯದ ಮೂಲವನ್ನು ಸಂರಕ್ಷಿಸುವ ದೃಷ್ಟಿಯಿಂದ ಈ ವಿನಾಯಿತಿಯನ್ನು ಮುಂದುವರಿಸ ದಿರಲು ತೀರ್ಮಾನಿಸಲಾಗಿದೆ. ಇದರಿಂದ ಪಾಲಿಕೆಗಳಿಗೆ ಸುಮಾರು ₹285 ಕೋಟಿ ಮೊತ್ತದ ಆದಾಯ ಲಭ್ಯವಾಗಲಿದೆ ಎಂದರು.

₹1,379.62 ಕೋಟಿ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನಿರ್ಮಾಣ ತ್ಯಾಜ್ಯ ಹಾಗೂ ರಸ್ತೆ ಗುಡಿಸುವಿಕೆಯಿಂದ ಸಂಗ್ರಹವಾಗುವ ತ್ಯಾಜ್ಯವನ್ನು ನಿರ್ವಹಿಸಲು 10 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ ₹1,379.62 ಕೋಟಿ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕೆಂಗೇರಿಯಲ್ಲಿ ಮಲ್ಟಿಪ್ಲೆಕ್ಸ್‌

ಕರ್ನಾಟಕ ಗೃಹ ಮಂಡಳಿ ವತಿಯಿಂದ ಕೆಂಗೇರಿಯ ವಳಗೇರಹಳ್ಳಿಯಲ್ಲಿ ಸರ್ವೆ ನಂ. 20/8ರಲ್ಲಿ 2 ಎಕರೆ 18 ಗುಂಟೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಸಂಕೀರ್ಣ/ ಮಲ್ಟಿಪ್ಲೆಕ್ಸ್‌ ಕಟ್ಟಡದ ಎರಡನೇ ಹಂತಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕಾಮಗಾರಿಯನ್ನು ₹68.50 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.

261120-4-712905729