ಬೆಂಗಳೂರು: ‘ಪಕ್ಷಭೇದ ಮರೆತು ಎಲ್ಲರೂ ಮೇಕೆದಾಟು ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರ ಮಗ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅಸೂಯೆ ಪಡುತ್ತಿದ್ದಾರೆ’ ಎಂದು‌ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಒಂದೇ ದಿನದಲ್ಲಿ ಅನುಮತಿ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈಗ ಅಸೂಯೆ ಮಾತುಗಳನ್ನು ಆಡುತ್ತಿದ್ದಾರೆ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’ ಎಂದರು.

‘ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ. ರಾಜ್ಯವು ತನ್ನ ವ್ಯಾಪ್ತಿಯಲ್ಲಿ ಅಣೆಕಟ್ಟು ನಿರ್ಮಿಸಿಕೊಳ್ಳಬಹುದು. ತಮಿಳುನಾಡು ಪಾಲಿನ ನೀರು ಹರಿಸಬೇಕು ಎಂಬ ನಿಲುವನ್ನು ಕೋರ್ಟ್‌ ಸ್ಪಷ್ಟಪಡಿಸಿದೆ. ತಮಿಳುನಾಡು ಸಲ್ಲಿಸಿದ ಮರುಪರಿಶೀಲನಾ ಅರ್ಜಿಯೂ ತಿರಸ್ಕೃತವಾಗಿದೆ. ಅವರ ರಾಜ್ಯದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದರೂ ನಾವು ಕ್ಯಾತೆ ತೆಗೆದಿಲ್ಲ. ಯೋಜನೆ ಕಾರ್ಯಗತವಾದರೆ ಬರಗಾಲದಂತಹ ಸನ್ನಿವೇಶದಲ್ಲಿ ಅವರ ರಾಜ್ಯಕ್ಕೆ 66 ಟಿಎಂಸಿ ಅಡಿ ನೀರು ಹರಿಸಲು ಅನುಕೂಲವಾಗಲಿದೆ’ ಎಂದು ಹೇಳಿದರು.

‘ಮೇಕೆದಾಟು ಒಂದು ಸಮತೋಲಿತ ಜಲಾಶಯ. ಮಂಡ್ಯ, ಹಾಸನ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಪ್ರಮುಖವಾಗಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ. ಕೃಷಿ ಉದ್ದೇಶಕ್ಕೆ ನೀರನ್ನು ಬಳಸುವ ಪ್ರಸ್ತಾಪವಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಶಾಸಕರು, ಅಧಿಕಾರಿಗಳು, ನೌಕರರು ಪ್ರತಿ ತಿಂಗಳು ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಅಲ್ಲೇ ಊಟ ಮಾಡಬೇಕು. ಆಹಾರದ ಗುಣಮಟ್ಟ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿಲಾಗಿದೆ ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ

261120-15-1135202230