ಬೆಂಗಳೂರು: ನಗರದ ಉತ್ತರ ಭಾಗದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಬ್ಬಾಳ ಮಾದರಿಯಲ್ಲಿ ಹೊಸ ಮೇಲ್ಸೇತುವೆ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ನಗರದ ಹಲವೆಡೆ ₹522.23 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಬುಧವಾರ ಮಾತನಾಡಿದರು.
‘ವಿಮಾನ ನಿಲ್ದಾಣದ ಕಡೆಗೆ ಹೋಗುವವರು ಹಾಗೂ ಉತ್ತರ ಬೆಂಗಳೂರಿನಿಂದ ನಗರದೊಳಗೆ ಬರುವವರು ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸುಮಾರು 20 ಕಿ.ಮೀ. ವ್ಯಾಪ್ತಿಯಲ್ಲಿ ಈ ಸಮಸ್ಯೆ ಇದೆ. ವಿಮಾನ ನಿಲ್ದಾಣಕ್ಕೆ ತೆರಳಲು ಈಗಿರುವ ಮಾರ್ಗವನ್ನೇ ಎಲ್ಲರೂ ಅವಲಂಬಿಸಬೇಕಾಗಿದೆ. ಇದಕ್ಕೆ ಪರ್ಯಾಯವಾಗಿ ಹೊಸ ಮೇಲ್ಸೇತುವೆ ನಿರ್ಮಿಸಲು ತೀರ್ಮಾನಿಸಿದ್ದೇವೆ’ ಎಂದರು.
‘ಮೇಲ್ಸೇತುವೆಯನ್ನು ಯಾವ ಮಾದರಿಯಲ್ಲಿ ನಿರ್ಮಿಸಬೇಕು ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಬೇಕಿದೆ. ಈ ಕುರಿತು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಅಧಿಕಾರಿಗಳು, ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿದ್ದು, ಯಾವ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು’ ಎಂದು ತಿಳಿಸಿದರು.
‘ಜಕ್ಕೂರು ವಿಮಾನ ನಿಲ್ದಾಣದ ಎದುರು ಉತ್ತರ ನಗರ ಪಾಲಿಕೆ ಕಚೇರಿ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳೆಯುತ್ತಿರುವ ಬೆಂಗಳೂರಿನ ಅಗತ್ಯಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ಕೈಗೊಳ್ಳಲಾಗುವುದು. ವಿಮಾನ ನಿಲ್ದಾಣ ನಿರ್ಮಾಣವಾದ ನಂತರ ಈ ಕ್ಷೇತ್ರದ ಆಸ್ತಿ ಬೆಲೆಯೂ ಹೆಚ್ಚಳವಾಗಿದೆ. ಹೊರ ರಾಜ್ಯಗಳ ಜನರೂ ಇಲ್ಲಿ ನೆಲೆಸಿದ್ದು ಅನೇಕರಿಗೆ ಅನುಕೂಲವಾಗಿದೆ. ಅದಕ್ಕೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಲು ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.
ಬೆಂಗಳೂರಿನ ಕಿರೀಟ: ‘ಮಾರುತಿ ಸೇವಾನಗರ ಮುಖ್ಯರಸ್ತೆ ಐಒಸಿ ಜಂಕ್ಷನ್ ಬಳಿ ರೋಟರಿ ಮೇಲ್ಸೇತುವೆಯಾಗಲಿದೆ. ಇದು ಮೂರು ಕ್ಷೇತ್ರಗಳನ್ನು ಜೋಡಿಸುತ್ತದೆ. ಈ ರೋಟರಿ ಮೇಲ್ಸೇತುವೆ ಬೆಂಗಳೂರಿಗೆ ಕಿರೀಟವಾಗಲಿದೆ. ಆರು ಪಥಗಳ ಈ ಮೇಲ್ಸೇತುವೆ ಕಾಮಗಾರಿ ತಾಂತ್ರಿಕವಾಗಿ ಕ್ಲಿಷ್ಟಕರವಾಗಿದೆ. ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗದಂತೆ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ’ ಎಂದರು.
‘ಇಡೀ ಬೆಂಗಳೂರು ನಗರದ ಅಭಿವೃದ್ಧಿಗೆ ₹1.50 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಮೇಲ್ಸೇತುವೆಗಳು, ಮೆಟ್ರೊ, ಬೆಂಗಳೂರು ಬಿಸಿನೆಸ್ ಕಾರಿಡಾರ್, ಸುರಂಗ ರಸ್ತೆ, ಉಪನಗರ ರೈಲು, ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಇದರಲ್ಲಿ ಸೇರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಡಿ.ಕೆ. ಶಿವಕುಮಾರ್ ಬ್ಯಾಟರಾಯನಪುರದ ಜಕ್ಕೂರು ರೈಲ್ವೆ ಮೇಲ್ಸೇತುವೆ, ಕೆ.ಆರ್. ಪುರದ ಗೆದ್ದಲಹಳ್ಳಿ ರೈಲ್ವೆ ಹಳಿಗೆ ಅಡ್ಡಲಾಗಿ ನಿರ್ಮಿಸಿರುವ ಮಳೆನೀರು ಕಾಲುವೆಯನ್ನು ಉದ್ಘಾಟಿಸಿದರು. ಮಾರುತಿ ಸೇವಾನಗರ ಮುಖ್ಯರಸ್ತೆ ಐಒಸಿ ಜಂಕ್ಷನ್ ಬಳಿ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿದರು. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣ ಆಗುತ್ತಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.
ಮೂಲಸೌಕರ್ಯಗಳ ಮಾಹಿತಿ
₹26.16 ಕೋಟಿ; ಜಕ್ಕೂರು ರೈಲ್ವೆ ಮೇಲ್ಸೇತುವೆ ಒಟ್ಟು ವೆಚ್ಚ
443 ಮೀಟರ್; ರೈಲ್ವೆ ಮೇಲ್ಸೇತುವೆ ಉದ್ದ
4; ಪಥಗಳ ರೈಲ್ವೆ ಮೇಲ್ಸೇತುವೆ
7.5 ಮೀಟರ್; ವಿಭಜಿತ ರಸ್ತೆ ಅಗಲ
ಸಂಪರ್ಕ: ಯಲಹಂಕ, ಹೆಬ್ಬಾಳ, ಥಣಿಸಂದ್ರ, ಕೋಗಿಲು, ಬಳ್ಳಾರಿ ರಸ್ತೆಗೆ
===
₹16.12 ಕೋಟಿ; ಗೆದ್ದಲಹಳ್ಳಿಯಲ್ಲಿ ನಿರ್ಮಿಸಿರುವ ರೈಲ್ವೆ ವೆಂಟ್ ವೆಚ್ಚ
₹3 ಕೋಟಿ; ರೈಲ್ವೆ ಇಲಾಖೆಯ ಅನುಮತಿ ಶುಲ್ಕ
32 ಮೀಟರ್; ಎರಡು ಹೊಸ ರೈಲ್ವೆ ವೆಂಟ್‌ಗಳ ಉದ್ದ
ಸೌಲಭ್ಯ: ಹೆಬ್ಬಾಳ ಕೆರೆ, ಯಲಹಂಕ ಕೆರೆ ಹಾಗೂ ಸರ್ವಜ್ಞನಗರ ವಿಧಾನಸಭೆ ಕ್ಷೇತ್ರದ ವಿವಿಧ ಭಾಗಗಳಿಂದ ಹರಿದು ಬರುವ ಮಳೆ ನೀರು, ಮಾನ್ಯತಾ ಟೆಕ್ ಪಾರ್ಕ್ ಮೂಲಕ ಅಧಿಕ ಪ್ರಮಾಣದಲ್ಲಿ ಹರಿಸಲು ಅನುಕೂಲ. ಸಾಯಿ ಲೇಔಟ್, ಗೆದ್ದಲಹಳ್ಳಿ ಪ್ರದೇಶಗಳಲ್ಲಿ ನೀರು ನಿಲ್ಲುವ ಸಮಸ್ಯೆಗೆ ಪರಿಹಾರ
₹436.45 ಕೋಟಿ; ಮಾರುತಿ ಸೇವಾ ಮುಖ್ಯರಸ್ತೆ ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆ– ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ವಿಸ್ತರಣೆ ಸಂಯುಕ್ತ ಯೋಜನೆ
24 ತಿಂಗಳು; ನಿರ್ಮಾಣ ಅವಧಿ
4 ಪಥ; ಬಾಣಸವಾಡಿ ರಸ್ತೆಗೆ ಏರು ಇಳಿ ರ್‍ಯಾಂಪ್
4 ಪಥ; ಕಮ್ಮನಹಳ್ಳಿ ಕಡೆಗೆ ವಿಭಜಿತ ರ್‍ಯಾಂಪ್
2 ಪಥ; ಹಳೆ ಮದ್ರಾಸ್ ರಸ್ತೆ/ ಬೈಯಪ್ಪನಹಳ್ಳಿ ಟರ್ಮಿನಲ್‌ಗೆ ಏಕಮುಖ ರ‍್ಯಾಂಪ್
2 ಪಥ; ಕೇಂದ್ರ ಇಳಿಜಾರು ರ‍್ಯಾಂಪ್ ಟರ್ಮಿನಲ್ ನಿಲ್ದಾಣ ಮತ್ತು ಮದ್ರಾಸ್ ರಸ್ತೆ ಕಡೆಗೆ
4 ಪಥ; ಮಾರುತಿ ಸೇವಾ ನಗರ ರಸ್ತೆ ಕಡೆಗೆ ವಿಭಜಿತ ರ‍್ಯಾಂಪ್
ಬೆಂಗಳೂರಿನ ನಾಗರಿಕರ ಬದುಕಿನಲ್ಲಿ ಒಂದೇ ದಿನ ಬದಲಾವಣೆ ಮಾಡಲು ಯಾರ ಕೈಯಲ್ಲಿಯೂ ಸಾಧ್ಯವಿಲ್ಲ. ಒಂದು ಯೋಜನೆ ತಯಾರಾಗಲು ಆರ್ಥಿಕ ವ್ಯವಸ್ಥೆ ಕಲ್ಪಿಸಬೇಕು. ತೆರಿಗೆಯ ಹೊರೆ ಹೆಚ್ಚಾಗದಂತೆ, ನಗರ ಪಾಲಿಕೆಗಳಿಗೆ ಸಹಾಯ ಮಾಡಲು ಕ್ರಮ ಕೈಗೊಳ್ಳಲಾಗಿದೆ
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ
261120-15-525953400

