ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಗುರುವಾರ ನಡೆದ ಸಂಧಾನ ಸಭೆಯುವಿಫಲವಾದ ಬೆನ್ನಲ್ಲೇ ಆಶಾ ಕಾರ್ಯಕರ್ತೆಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆ ಯರ ಸಂಘದ ಅಧ್ಯಕ್ಷ ಸೋಮಶೇಖರ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ಸಂಘಟನೆಯ ಪದಾಧಿಕಾರಿಗಳನ್ನು ಮುಖ್ಯಮಂತ್ರಿ ಸಭೆಗೆ ಆಹ್ವಾನಿಸಿದ್ದರು. ಸಂಧಾನ ಸಭೆಯು ವಿಫಲವಾದ ಬಳಿಕ ಪ್ರತಿಭಟನಾ ಸ್ಥಳಕ್ಕೆ ಗುರುವಾರ ಸಂಜೆ ಬಂದ ಸೋಮಶೇಖರ ಯಾದಗಿರಿ ಅವರು, ‘ಬೆಳಗಾವಿ ಅಧಿವೇಶನ ಮತ್ತು ಮುಂದಿನ ಬಜೆಟ್‌ ಮಂಡನೆ ವೇಳೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಸರ್ಕಾರವು ‘ಆಶಾ’ಗಳಿಗೆ ವಿಶ್ವಾಸದ್ರೋಹ ಮಾಡಿದೆ’ ಎಂದು ಆರೋಪಿಸಿದರು.

‘ನಿಮ್ಮ ಬೇಡಿಕೆಯ ಮೊತ್ತ ದೊಡ್ಡ ದಿದೆ. ನೀವು ಗಾಳಿಯಲ್ಲಿ ಇರಬೇಡಿ’ ಎಂದು ಲಘುವಾಗಿ ಮಾತನಾಡಿದ್ದಾರೆ. ₹15 ಸಾವಿರ ಗೌರವಧನ ನೀಡಬೇಕೆಂಬ ಬೇಡಿಕೆಗೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಆದ್ದರಿಂದ ನಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವ ವರೆಗೂ ಅಹೋರಾತ್ರಿ ಹೋರಾಟ ಮುಂದುವರಿಯುತ್ತದೆ’ ಎಂದು ಘೋಷಿಸಿದರು.

ಡಿ.ನಾಗಲಕ್ಷ್ಮಿ ಮಾತನಾಡಿ, ‘ಆಶಾಗಳ ನ್ಯಾಯಯುತ ಬೇಡಿಕೆಯನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಲು ಪ್ರಯತ್ನಿಸಲಾಯಿತು. ಆದರೆ, ಆಶಾಗಳ ನೋವಿಗೆ ಸರ್ಕಾರ ಸ್ಪಂದಿಸಿಲ್ಲ’ ಎಂದು ಆಪಾದಿಸಿದರು.

ಇದಕ್ಕೂ ಮುನ್ನ ಪ್ರತಿಭಟನಾ ಸ್ಥಳಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಭೇಟಿ ನೀಡಿ ಮನವಿ ಆಲಿಸಿದರು. ಅವರ ವಿರುದ್ಧ ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.

‘ನಾನು ಸರ್ಕಾರವಲ್ಲ. ಮಹಿಳಾ ಆಯೋಗದ ಅಧ್ಯಕ್ಷೆ. ಮಹಿಳೆಯರ ಪರ ಧ್ವನಿ ಎತ್ತುವುದು ನನ್ನ ಕೆಲಸ. ಈ ಬಾರಿಯೂ ಅದನ್ನು ನಾನು ಮಾಡುತ್ತೇನೆ. ನಿಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಜತೆ ಮಾತನಾಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ’ ಎಂದು ನಾಗಲಕ್ಷ್ಮಿ ಹೇಳಿದರು.

ಆಗ ಆಶಾ ಕಾರ್ಯಕರ್ತೆಯರು, ‘ಸರ್ಕಾರವು ನಾವು ಇಟ್ಟಿದ್ದ ಎಲ್ಲಾ ವಿಶ್ವಾಸವನ್ನು ಕಳೆದುಕೊಂಡಿದೆ. ಕಳೆದಬಾರಿ ಸರ್ಕಾರದ ಮೇಲೆ ವಿಶ್ವಾಸವಿಟ್ಟು ನಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದೆವು. ಈ ಬಾರಿ ಮೋಸ ಹೋಗುವುದಿಲ್ಲ. ಸರ್ಕಾರದಿಂದ ಲಿಖಿತ ಭರವಸೆ ಸಿಗುವವರೆಗೂ ಪ್ರತಿಭಟನೆ ಯನ್ನು ಅಂತ್ಯಗೊಳಿಸುವುದಿಲ್ಲ’ ಎಂದು ಘೋಷಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಎ. ದೇವದಾಸ್, ಕೆ.ವಿ.ಭಟ್, ಬಸನಗೌಡ ಹರವಿ, ಚಂದ್ರಶೇಖರ್ ಮೇಟಿ, ವೀರೇಶ್ ಪಾಲ್ಗೊಂಡಿದ್ದಾರೆ.

ಅಧಿವೇಶನದ ನಂತರ ನಿರ್ಧಾರ–ಸಿ.ಎಂ

‘ಬೆಳಗಾವಿ ಅಧಿವೇಶನ ಮುಗಿದ ನಂತರ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರತಿನಿಧಿಗಳ ಜತೆ ಗುರುವಾರ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

‘ರಾಜ್ಯದಲ್ಲಿನ 41 ಸಾವಿರ ಆಶಾ ಕಾರ್ಯಕರ್ತೆಯರ ಸೇವೆ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿ ಇದೆ. ಬೇಡಿಕೆಗಳ ಕುರಿತು ಒಂದೇ ದಿನಕ್ಕೆ ತೀರ್ಮಾನ ಮಾಡಲು ಆಗದು. ಅಧಿವೇಶನದಲ್ಲೂ ಚರ್ಚಿಸಲಾಗುವುದು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯ ಹಾಗೂ ಜಾತಿ ಸಮೀಕ್ಷೆ ಕಾರ್ಯಗಳ ಗೌರವಧನ ಬಿಡುಗಡೆಗೆ ತಕ್ಷಣವೇ ಕ್ರಮಕೈಗೊಳ್ಳಲಾಗುವುದು’ ಎಂದರು.

‘ಗೃಹಲಕ್ಷ್ಮಿ ಯೋಜನೆಗೆ ಆಶಾಕಾರ್ಯಕರ್ತೆಯರನ್ನು ಪರಿಗಣಿಸಬಾರದು ಎಂಬ ಮಾತಿಗೂ ಕಿವಿಗೊಡದೆ ಸೌಲಭ್ಯ ನೀಡಿದ್ದೇವೆ. ಉಚಿತ ಸಾರಿಗೆ, ವಿದ್ಯುತ್‌ ಸೌಲಭ್ಯ ಕಲ್ಪಿಸಲಾಗಿದೆ. ಪಿಂಚಣಿ ಯೋಜನೆ ಜಾರಿ ಮಾಡಿದ್ದೇ ಕಾಂಗ್ರೆಸ್‌ ನೇತೃತ್ವದ ಸರ್ಕಾರ. ಕೇಂದ್ರ ಸರ್ಕಾರ ತನ್ನ ಪಾಲಿನ ಮೊತ್ತ ಹೆಚ್ಚಳ ಮಾಡಿಲ್ಲ. ಕೇಂದ್ರದ ಮೇಲೂ ಒತ್ತಡ ಹಾಕಬೇಕು’ ಎಂದು ಹೇಳಿದರು.

‘ಕೆಲಸದ ಆಧಾರದ ಮೇಲೆ ಇತರೆ ಪ್ರೋತ್ಸಾಹಧನ ಸೇರಿ ತಿಂಗಳಿಗೆ ₹8 ಸಾವಿರ ದೊರೆಯುತ್ತಿದೆ. ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆಯ ವಾಸ್ತವಿಕತೆ ಹಾಗೂ ಸರ್ಕಾರದ ಆರ್ಥಿಕ ಇತಿಮಿತಿಗಳನ್ನು ಮನವರಿಕೆ ಮಾಡಲಾಗಿದೆ. ಪ್ರತಿಭಟನೆ ಹಿಂಪಡೆಯುವ ವಿಶ್ವಾಸವಿದೆ’ ಎಂದರು.

261120-4-2106577954