ಬೆಂಗಳೂರು: ‘ಇಂದಿರಾ ಕ್ಯಾಂಟೀನ್ಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಶಾಸಕರು, ಅಧಿಕಾರಿಗಳು ಭೇಟಿ ನೀಡಿ, ಆಹಾರ ಸೇವಿಸಬೇಕು. ಇದರಲ್ಲಿ ಯಾವುದೇ ಲೋಪ ಆಗಬಾರದು’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 109ನೇ ಜನ್ಮದಿನದ ಪ್ರಯುಕ್ತ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯವು ಗುರುವಾರ ಇಲ್ಲಿನ ಜವಾಹರಲಾಲ್ ನೆಹರೂ ತಾರಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 16 ಹೊಸ ಇಂದಿರಾ ಕ್ಯಾಂಟೀನ್ಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ರಾಜ್ಯದಲ್ಲಿ 383 ಇಂದಿರಾ ಕ್ಯಾಂಟೀನ್ಗಳಿದ್ದು, ವೇಳಾಪಟ್ಟಿ ರಚಿಸಿ ನಿಯಮಿತವಾಗಿ ಕ್ಯಾಂಟೀನ್ಗಳಿಗೆ ಭೇಟಿ ನೀಡುವಂತೆ ಸಿಬ್ಬಂದಿಗೆ ಸೂಚಿಸಬೇಕು’ ಎಂದು ಸೂಚಿಸಿದರು.
‘ಬಿಜೆಪಿ, ಜೆಡಿಎಸ್ ಶಾಸಕರು ತಮ್ಮ ಕ್ಷೇತ್ರದಲ್ಲಿ ಎಷ್ಟೋ ಕಡೆ ಕ್ಯಾಂಟೀನ್ ಸ್ಥಗಿತಗೊಳಿಸಿದ್ದಾರೆ’ ಎಂದರು.
ತುಮಕೂರು ನಗರ ಪಾಲಿಕೆಯ ವಾರ್ಡ್ 2ರ ಎಪಿಎಂಸಿ ಮಾರುಕಟ್ಟೆ, ವಿಜಯಪುರ ಪಾಲಿಕೆಯ ಜಿಲ್ಲಾಸ್ಪತ್ರೆ ಮೈದಾನ ಹಾಗೂ ದಾವಣಗೆರೆ ಪಾಲಿಕೆಯ ವಾರ್ಡ್ 17ರ ಕ್ಯಾಂಟೀನ್ಗಳು ‘ಅತ್ಯುತ್ತಮ ಇಂದಿರಾ ಕ್ಯಾಂಟೀನ್’ ಪ್ರಶಸ್ತಿ ಪಡೆದವು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕಾಮಗಾರಿಗಳು ಮತ್ತು ಯಂತ್ರೋಪಕರಣಗಳ ಲೋಕಾರ್ಪಣೆ ಮಾಡಲಾಯಿತು.
‘ಲೋಪವಾದರೆ ಬಡಿದುಹಾಕುವೆ’
‘ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಪ್ರತಿಯೊಂದಕ್ಕೂ ಲೆಕ್ಕ ಇರಬೇಕು. ಫೋಟೊ, ವಿಡಿಯೊ ಇರಬೇಕು. ಶಾಸಕರು, ಕಾರ್ಪೊರೇಟರ್ ಹೇಳಿದರೆಂದು ಕಳ್ಳಲೆಕ್ಕ, ಕಳ್ಳಬಿಲ್ ಮಾಡಿದರೇ ನೀವೇ ಜವಾಬ್ದಾರರು. ಇಂಥ ಲೋಪಗಳು ಕಂಡರೆ ಬಡಿದುಹಾಕುವೆ’ ಎಂದು ಶಿವಕುಮಾರ್ ಹೇಳಿದರು.
‘ಕೆಲಸದಲ್ಲಿ ಹೆಚ್ಚು ಕಡಿಮೆ ಇರಬಾರದು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಕರ್ತವ್ಯವನ್ನು ಪಾರದರ್ಶಕವಾಗಿ ಮಾಡಬೇಕು’ ಎಂದರು.
‘ರಾಜ್ಯದ ಎಲ್ಲ ನಗರ ವಾಹನ ದಟ್ಟಣೆ ಹೆಚ್ಚಾಗಿದ್ದು, ಸರ್ಕಾರವು ಹೊಸ ನಗರ ಯೋಜನೆ ರೂಪಿಸಿದೆ. ಶಿಸ್ತು ಬದ್ಧ ರಸ್ತೆ ನಿರ್ಮಾಣಕ್ಕೆ ‘ಹೊಸ ರಸ್ತೆ ಗ್ರಿಡ್ ವ್ಯವಸ್ಥೆ’ ಜಾರಿ ಮಾಡಲಾಗುವುದು’ ಎಂದು ಹೇಳಿದರು.
261120-51-1457852190

