ಕಾಸರಗೋಡು: ಧಾರ್ಮಿಕತೆ ಮತ್ತು ಸಾಂಸ್ಕೃತಿಕ ಪ್ರಧಾನ ಭೂಮಿಕೆಯಾಗಿರುವ ಗಡಿನಾಡು ಕಾಸರಗೋಡಿನ ಎಡನೀರು ಗೋಪಾಲಕೃಷ್ಣ ಸ್ವಾಮಿ ಮಠ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ನೆಲೆವೀಡು ಆಗಿದೆ.
ಭಾಷಾವಾರು ಪ್ರಾಂತ್ಯ ರಚನೆಯ ಪರಿಣಾಮ 1957ರಿಂದ ಇಂದಿನವರೆಗೂ ನಡೆಯುತ್ತಿರುವ ಕರ್ನಾಟಕ ವಿಲಿನೀಕರಣ ಆಂದೋಲನ ಮತ್ತು ಭಾಷೆ-ಸಂಸ್ಕೃತಿಗಳ ಉಳಿವಿಗಾಗಿ ನಡೆದು ಬರುತ್ತಿರುವ ಹೋರಾಟಗಳಲ್ಲಿ ಮಠ ನೇರ ಭಾಗಿಯಾಗಿರುವುದು ಜನಪರ ಧೋರಣೆಗೆ ಸಾಕ್ಷಿಯಾಗಿದೆ. ದೇಶದ ಸಂವಿಧಾನದಲ್ಲಿ ಬದಲಾವಣೆ ತಂದ ಕೇಶವಾನಂದ ಭಾರತೀ ಪ್ರಕರಣ ಸೇರಿದಂತೆ ಅನೇಕ ನ್ಯಾಯಾಂಗ ಹೋರಾಟ ಮತ್ತದರ ಗೆಲುವಿನ ಇತಿಹಾಸ ಹೊಂದಿರುವ ಮಠ ಇಂದಿಗೂ ಕನ್ನಡ ಹೋರಾಟದೊಂದಿಗೆ ಹೆಗಲಿಗೆ ಹೆಗಲಾಗಿದೆ.
ಭಾಷಾವಾರು ಪ್ರಾಂತ್ಯ ರಚನೆಗೆ ಮುನ್ನವೇ ಕನ್ನಡದ ಕಂಪು
ಭಾಷಾವಾರು ಪ್ರಾಂತ್ಯ ರಚನೆಗೆ ಮುನ್ನವೇ ಇಲ್ಲಿನ ಕಾರ್ಯಮಗಳೆಲ್ಲವೂ ಕನ್ನಡದಲ್ಲೇ ನಡೆಯುತ್ತಿದ್ದು, ಕರ್ನಾಟಕದೊಂದಿಗೆ ನೇರವಾದ ಸಂಪರ್ಕ-ಸಂವಹನ ಹೊಂದಿ, ಕೇರಳದ ಮಠೀಯ ವ್ಯವಸ್ಥೆಯ ಸಂಸ್ಥೆಗಳಲ್ಲೇ ಅಪರೂಪದ್ದು ಎನಿಸಿಕೊಂಡಿದೆ.
ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ನಂತರವೂ ಮಲೆಯಾಳ ಭಾಷೆಯ ಪ್ರಭಾವಕ್ಕೆ ಮಠ ಒಳಗಾಗಿಲ್ಲ. ಕಾಸರಗೋಡಿನ ಕನ್ನಡ ಹೋರಾಟಕ್ಕೆ ಇತರ ವಲಯಗಳಿಂದ ತೀವ್ರ ವಿರೋಧಗಳಿದ್ದರೂ, ಅವನ್ನು ಲೆಕ್ಕಿಸದೆ ಸ್ವಾಮೀಜಿಗಳಾಗಿದ್ದರೂ, ಹಿಂದಿನ ಪೀಠಾಧೀಶ ಕೇಶವಾನಂದ ಭಾರತೀ ಸ್ವಾಮೀಜಿ ಮತ್ತು ಇಂದಿನ ಪೀಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕನ್ನಡ ಹೋರಾಟಗಳಲ್ಲಿ ನೇರ ಭಾಗಿಯಾಗುತ್ತಿದ್ದಾರೆ ಎಂಬುದು ಸಾಮಾನ್ಯ ಮಾತಲ್ಲ.

ಕೇಶವಾನಂದ ಭಾರತೀ ಸ್ವಾಮೀಜಿ, ಎಡನೀರುಮಠ, ಕಾಸರಗೋಡು
ಮಠ ವ್ಯವಸ್ಥೆಯ ಮಡಿ-ಮೈಲಿಗೆ ಇತ್ಯಾದಿಗಳನ್ನೂ ಮೀರಿ ಕಾಸರಗೋಡಿನ ಜಿಲ್ಲಾಧಿಕಾರಿ ಕಚೇರಿಗೆ ದಿಗ್ಭಂಧನ, ರಸ್ತೆ ಬದಿಯ ಹೋರಾಟಗಳು, ಧರಣಿಗಳು ಇತ್ಯಾದಿಗಳಲ್ಲಿ ಉಭಯ ಯತಿಗಳೂ ಭಾಗಿಯಾಗಿದ್ದಾರೆ. ಕಾಸರಗೋಡು ನೂತನ ಬಸ್ ನಿಲ್ದಾಣದ ಬಳಿ ಸಹಿ ಮರದಡಿ ಸತತ 7 ದಿನಗಳ ಧರಣಿ ನಡೆದಾಗ ಅಲ್ಲಿಗೆ ಆಗಮಿಸಿದ್ದ ಕೇಶವಾನಂದ ಭಾರತೀ ಸ್ವಾಮೀಜಿ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಕಲಾವದಿರಾಗಿದ್ದ ಕೇಶವಾನಂದ ಭಾರತೀ ಸ್ವಾಮೀಜಿ
ಹಿಂದಿನ ಯತಿಗಳಾಗಿದ್ದ ಕೇಶವಾನಂದ ಭಾರತೀ ಸ್ವಾಮೀಜಿ ಬಹುಮುಖ ಪ್ರತಿಭಾವಂತರಾಗಿದ್ದರು. ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅದ್ವಿತೀಯರಾಗಿದ್ದರು. ಯಕ್ಷಗಾನ, ನಾಟಕ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಗಮಕ, ಹರಿಕಥೆ ಸಹಿತ ಕಲೆಗಳಲ್ಲಿ ಸ್ವತಃ ಸಿದ್ಧಹ್ತರಾಗಿದ್ದರು. ಇದೆಲ್ಲವೂ ಕನ್ನಡ ಕಲೆಗಳೇ. ಅನೇಕ ವರ್ಷ ತಿರುಗಾಟ ನಡೆಸಿದ ಎಡನೀರು ಮಠದ ಯಕ್ಷಗಾನ ಮೇಳ ಇತ್ತೀಚಿನ ವರ್ಷದವರೆಗೂ ಕ್ರಿಯಾಶೀಲವಾಗಿತ್ತು. ಪ್ರಸಿದ್ಧ ಕಲಾವಿದರ ಜೋಡಣೆಯಿದ್ದ ಈ ಮೇಳದಲ್ಲಿ ಕೇಶವಾನಂದ ಭಾರತೀ ಸ್ವಾಮೀಜಿ ಪ್ರಧಾನ ಭಾಗವತಿಗೆ ನಡೆಸುತ್ತಿದ್ದರು.
ಮಠದಲ್ಲಿರುವ ಗ್ರಂಥಗಳ ಭಂಡಾರದಲ್ಲಿ ಬಹುಪಾಲು ಕನ್ನಡದ ಪುಸ್ತಕಗಳೇ ಇವೆ. ಅವರ ಚಾರುರ್ಮಾಸ್ಯ ವೃತಾಚರಣೆಯ ಅವಧಿಯಲ್ಲಿ ಶೇ 97 ಕಾರ್ಯಕ್ರಮಗಳೂ ಕನ್ನಡದಲ್ಲಿದ್ದು, ಇಂದಿನ ಯತಿಗಳಾದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಚಾತುರ್ಮಾಸ್ಯ ವೃತಾಚರಣೆಯಲ್ಲೂ ಅದೇ ಆದ್ಯತೆ ಮುಂದುವರಿದುಕೊಂಡು ಬಂದಿದೆ.
ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಿತ ಇಲಾಖೆಗಳ ಕಾರ್ಯಕ್ರಮಗಳು ಈ ಮಠದಲ್ಲಿ ಸತತವಾಗಿ ನಡೆದು ಬರುತ್ತಿವೆ. ಇನ್ನೊಂದೆಡೆ ಕನ್ನಡ ಪರ ಸಂಘಟನೆಗಳಾದ ಕರ್ನಾಟಕ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ, ಕರ್ನಾಟಕ ಗಮಕ ಕಲಾ ಪರಿಷತ್ ಸಹಿತ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಬಹುಪಾಲು ಮಠದಲ್ಲೇ ನಡೆಯುತ್ತಿವೆ. ಉಳಿದಂತೆ ನಡೆಯುವ ಕಾರ್ಯಕ್ರಮಗಳಲ್ಲಿ ಎಡನೀರು ಮಠದ ಸ್ವಾಮೀಜಿ ಭಾಗಿಯಾಗುತ್ತಾರೆ.
ಮಲೆಯಾಳೀಕರಣಕ್ಕೆ ಪ್ರಬಲ ವಿರೋಧ
ಮಠಕ್ಕೆ ಸಂಬಂಧ ಪಟ್ಟ ಇಲ್ಲಿನ ಆವರಣದಲ್ಲಿರುವ ಹೈಯರ್ ಸೆಕೆಂಡರಿ ಶಾಲೆಯನ್ನು ಬಲವಂತ ಮಲೆಯಾಳೀಕರಣ ನಡೆಸುವ ವ್ಯವಸ್ಥಿತ ಹುನ್ನಾರ ಅನೇಕ ವರ್ಷಗಳ ಹಿಂದೆಯೇ ನಡೆದುಬಂದಿತ್ತು. ಇದನ್ನು ಪ್ರಬಲವಾಗಿ ವಿರೋಧಿಸಿದ ಮಠ ಇಂದಿಗೂ ಶಾಲೆಯನ್ನು ಕನ್ನಡ ಮಾಧ್ಯಮ ಶಿಕ್ಷಣಾಲಯವಾಗಿಯೇ ಉಳಿಸಿಕೊಂಡು ಮಾದರಿಯಾಗಿದೆ.
70ರ ದಶಕದಲ್ಲಿ ಸ್ಥಾಪನೆಗೊಂಡ ಶಾಲೆಯನ್ನು ಮಲೆಯಾಳ ಮಾಧ್ಯಮವಾಗಿ ಪರಿವರ್ತಿಸುವಂತೆ ಮಲೆಯಾಳ ಹೋರಾಟ ಸಮಿತಿಯ ಮಂದಿ 2 ತಿಂಗಳ ಕಾಲ ಸತತ ಪ್ರತಿಭಟನೆ ನಡೆಸಿ ಶಾಲೆಯನ್ನು ಮುಚ್ಚಿಸಿದ್ದರು. ಕಿಟಿಕಿ ಗಾಜು ಒಡೆದು, ಬಾಗಿಲನ್ನು ಧ್ವಂಸಗೊಳಿಸಿ ಹಾನಿ ಮಾಡಿದ್ದರು. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಭೀತಿಯ ವಾತಾವರಣವನ್ನು ಸೃಷ್ಟಿಸಿದ್ದರು. ಅಂದಿನ ಯತಿ ಕೇಶವಾನಂದ ಭಾರತೀ ಸ್ವಾಮೀಜಿ ಅವರು ದಿಟ್ಟ ನಿಲುವಿನಿಂದ ಎಲ್ಲವನ್ನೂ ಸಂಯಮದಿಂದ ಎದುರಿಸಿ ಕನ್ನಡ ಮಾಧ್ಯಮವನ್ನು ಉಳಿಸಿಕೊಳ್ಳುವಲ್ಲಿ ವಿಜಯಶಾಲಿಯಾದರು. ಇಂದಿನ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಲಯಾಳಂಗೆ ಅವಕಾಶ ನೀಡಿಲ್ಲ.
ಶಾಸಕರ ಆಯ್ಕೆಯಲ್ಲೂ ಮಠದ ಪ್ರಭಾವ
ಕನ್ನಡ ಹೋರಾಟಕ್ಕಾಗಿಯೇ ಹುಟ್ಟಿಕೊಂಡ ಕರ್ನಾಟಕ ಸಮಿತಿಯ ನಾಯಕರಾಗಿದ್ದ ಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಯು.ಪಿ.ಕುಣಿಕುಳ್ಳಾಯರು ಇಬ್ಬರೂ ಚುನಾವಣೆಗಳಲ್ಲಿ ಸ್ಪರ್ಧಿಸಿ ಶಾಸಕರಾಗಿ ಕೇರಳ ವಿಧಾನಸಭೆಯಲ್ಲಿ ಗಡಿನಾಡ ಕನ್ನಡಿಗರ ಧ್ವನಿಯಾಗಿದ್ದರು. ಇವರ ಗೆಲವಿನಲ್ಲಿ, ಮುಂದಿನ ಹೆಜ್ಜೆಗಾರಿಕೆಗಳಲ್ಲಿ ಎಡನೀರು ಮಠದ ಬೆಂಬಲ ಪ್ರಬಲವಾಗಿತ್ತು. ಜೊತೆಗೆ ಇವರಿಬ್ಬರೂ ಮಠದ ವಕೀಲರೂ ಆಗಿದ್ದರು. ಇವರ ನೇತೃತ್ವದಲ್ಲಿ ನಡೆದಿದ್ದ ಐತಿಹಾಸಿಕ ಹೋರಾಟಗಳಲ್ಲಿ ಮಠದ ಪಾತ್ರ ಹೇರಳವಾಗಿತ್ತು. ನಂತರವೂ ಇದೇ ಸಂಬಂಧ ಗಾಢವಾಗಿ ಮುಂದುವರಿದಿದೆ.
ಹಿಂದೆ ಮಠದ ನಿಕಟ ಸಂಪರ್ಕದಲ್ಲಿದ್ದ ಮತ್ತು ಇಂದಿಗೂ ಆಪ್ತ ವಲಯದಲ್ಲಿರುವ ಸಾಹಿತಿಗಳು, ಕಲಾವಿದರೂ, ರಾಜಕೀಯ ಮುಖಂಡರು, ಧಾರ್ಮಿಕ ಮುಂದಾಳುಗಳು, ಸಾಮಾಜಿಕ ಕಾರ್ಯಕರ್ತರು ಎಲ್ಲರೂ ಗಡಿನಾಡ ಕನ್ನಡ ಹೋರಾಟಗಾರರಾಗಿದ್ದಾರೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ನಾಡೋಜ ಡಾ.ಕಯ್ಯಾರ ಕಿಂಞಣ್ಣ ರೈ, ಕೀರಿಕ್ಕಾಡು ಮಾಸ್ಟರ್ ವಿಷ್ಣು ಭಟ್, ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರು, ಪೆರ್ಲ ಕೃಷ್ಣ ಭಟ್ಟರು, ವಿದ್ವಾನ್ ಪುಂಡೂರು ವೆಂಕಟರಾಜ ಪುಣಿಂಚತ್ತಾಯ, ಶತಾಯುಷಿ ಮೃದಂಗ ವಿದ್ವಾನ್ ಕೋಟೆಕಾರು ಬಾಬು ರೈ, ಖಂಡಿಗೆ ಶ್ಯಾಮ ಭಟ್ಟರು, ನ್ಯಾಯಮೂರ್ತಿ ಯು.ಎಲ್.ಭಟ್ಟರು, ಕರ್ನಾಟಕ ಮಾನವಹಕ್ಕು ಆಯೋಗದ ಅಧ್ಯಕ್ಷ ಟಿ.ಶ್ಯಾಮ ಭಟ್, ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ಯ ಮೊದಲಾದವರು ಈ ಸಾಲಿನ ಅಗ್ರಮಾನ್ಯರು.

ಸಚ್ಚಿದಾನಂದ ಭಾರತೀ ಸ್ವಾಮೀಜಿ, ಎಡನೀರುಮಠ

