ವೆಲ್ಲಿಂಗ್ಟನ್ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ನ್ಯೂಝಿಲೆಂಡ್ ತಂಡ ಬರೋಬ್ಬರಿ 368 ರನ್ ಕಲೆಹಾಕಿ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಢಿಯಾ ನಾಯಕ ಶುಭ್ಮನ್ ಗಿಲ್ ಅವರ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಬೌಲರ್ಗಳು ಆರಂಭದಲ್ಲೇ ಯಶಸ್ಸು ತಂದುಕೊಟ್ಟಿದ್ದರು. ವೇಗಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿದ ನ್ಯೂಝಿಲೆಂಡ್, ಕೇವಲ 70 ರನ್ಗಳಿಗೆ ತನ್ನ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ತಂಡವು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದಾಗ ಜೊತೆಯಾದ ಹೆನ್ರಿ ನಿಕೋಲ್ಸ್ ಮತ್ತು ಗ್ಲೆನ್ ಫಿಲಿಪ್ಸ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಆರನೇ ವಿಕೆಟ್ಗೆ ದಾಖಲೆಯ ಜೊತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿತು.
ತಾಳ್ಮೆಯ ಆಟವಾಡಿದ ಹೆನ್ರಿ ನಿಕೋಲ್ಸ್ 335 ಎಸೆತಗಳಲ್ಲಿ 21 ಫೋರ್ಗಳೊಂದಿಗೆ ಅಜೇಯ 175 ರನ್ ಬಾರಿಸಿದರೆ, ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಫಿಲಿಪ್ಸ್ 118 ರನ್ ಗಳಿಸಿದರು. ಪರಿಣಾಮವಾಗಿ ಕಿವೀಸ್ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 368 ರನ್ಗಳ ಸವಾಲಿನ ಮೊತ್ತ ಕಲೆಹಾಕಿ ಆಲೌಟ್ ಆಗಿದೆ. ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದು ಮಿಂಚಿದರೆ, ಆಕಾಶ್ ದೀಪ್ 3 ವಿಕೆಟ್ ಕಬಳಿಸಿ ಉತ್ತಮ ಸಾಥ್ ನೀಡಿದರು.
ಇದೀಗ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ಆರಂಭಿಸಲಿದ್ದು, ವೆಲ್ಲಿಂಗ್ಟನ್ನ ಸವಾಲಿನ ಪಿಚ್ನಲ್ಲಿ ನ್ಯೂಝಿಲೆಂಡ್ ವೇಗಿಗಳನ್ನು ಭಾರತೀಯ ಬ್ಯಾಟರ್ಗಳು ಹೇಗೆ ಎದುರಿಸಲಿದ್ದಾರೆ ಎಂಬುದು ಪಂದ್ಯದ ಮುಂದಿನ ಫಲಿತಾಂಶವನ್ನು ನಿರ್ಧರಿಸಲಿದೆ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ ,
ಡ್ಯಾರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ.
ಇದನ್ನೂ ಓದಿ: ಅಚ್ಚರಿಯ ಆಯ್ಕೆ… ಇಬ್ಬರನ್ನು ಕೈಬಿಟ್ಟ ಟೀಮ್ ಇಂಡಿಯಾ!
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್ , ದೇವದತ್ ಪಡಿಕ್ಕಲ್ , ಶುಭ್ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಧ್ರುವ್ ಜುರೆಲ್ , ಆಕಾಶ್ ದೀಪ್ , ಅನ್ಶುಲ್ ಕಂಬೋಜ್ , ಜಸ್ಪ್ರೀತ್ ಬುಮ್ರಾ , ಪ್ರಸಿದ್ಧ್ ಕೃಷ್ಣ.

