ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿ 74 ದಿನಗಳಾಗಿವೆ. ಪ್ರಸ್ತುತ ಗಟ್ಟಿ ಸ್ಪರ್ಧಿಗಳು ಮಾತ್ರವೇ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಮನೆಯ ಸದಸ್ಯರ ಬಗ್ಗೆಯೂ ಸಹ ಮನೆಯ ಒಳಗೆ ಹಾಗೂ ಹೊರಗಡೆಯೂ ಅಭಿಪ್ರಾಯಗಳು ಬದಲಾವಣೆ ಆಗುತ್ತಲೇ ಇವೆ. ಇದೀಗ ಸೌಂದರ್ಯಾ ಬಗ್ಗೆ ಮನೆಯ ಸದಸ್ಯರಿಗೆ ಅಭಿಪ್ರಾಯ ಬದಲಾವಣೆ ಆಗುತ್ತಿದೆ. ಸೌಂದರ್ಯಾ ಅವರು ಇತ್ತೀಚೆಗಿನ ದಿನಗಳಲ್ಲಿ ಆಟ ಆಡುತ್ತಿರುವ ರೀತಿಯಿಂದಾಗಿಯೇ ಈ ಅಭಿಪ್ರಾಯ ಭೇದ, ಬದಲಾವಣೆ ಉಂಟಾಗುತ್ತಿದೆ.
ನಿನ್ನೆ (ನವೆಂಬರ್ 19)ರ ಎಪಿಸೋಡಿನಲ್ಲಿ ಸೌಂದರ್ಯಾ, ತಮ್ಮ ಆಪ್ತ ಗೆಳತಿ ಆಸಿಯಾ ಜೊತೆಗೆ ಜಗಳ ಮಾಡಿದರು. ಒಂದು ಹಂತದಲ್ಲಂತೂ ಬಕೆಟ್ ಹಿಡಿದುಕೊಂಡು ಆಸಿಯಾ ಮೇಲೆ ಹಲ್ಲೆಗೆ ಮುಂದಾಗಿದ್ದರು. ನಾಮಿನೇಷನ್ ಟಾಸ್ಕ್ ಇನ್ನಿತರೆಗಳು ಮುಗಿದ ಬಳಿಕ ಮನೆಯ ಕೆಲ ಸದಸ್ಯರು ಸೌಂದರ್ಯಾ ವರ್ತನೆ ಬಗ್ಗೆ ಚರ್ಚೆ ಶುರು ಮಾಡಿದರು. ವಿಶೇಷವಾಗಿ ಪ್ರಶಾಂತ್, ಗಗನ್, ತಾಂಡವ್, ಜಗದೀಶ್ ಮತ್ತು ಶಾಸ್ತ್ರಿ ಅವರುಗಳು ಸೌಂದರ್ಯಾ ಅವರ ಬಗ್ಗೆಯೇ ವಿಶೇಷವಾಗಿ ಚರ್ಚೆ ಮಾಡಿದರು.
ಪ್ರಶಾಂತ್ ಹೇಳಿದಂತೆ, ಸೌಂದರ್ಯಾ, ಬಿಗ್ಬಾಸ್ ಮನೆಯ ಒಳಗೆ ಮಾಡುತ್ತಿರುವುದೆಲ್ಲ ನಾಟಕ ಅಥವಾ ಪೂರ್ವ ಯೋಜಿತ. ಸೌಂದರ್ಯಾ ಈಗಾಗಲೇ ಒಂದು ಜನಪ್ರಿಯ ರಿಯಾಲಿಟಿ ಶೋ ಮಾಡಿಕೊಂಡು ಬಂದಿದ್ದಾರೆ. ಒಂದು ರಿಯಾಲಿಟಿ ಶೋನಲ್ಲಿ ಹೇಗೆ ಮಾತನಾಡಿದರೆ, ಹೇಗೆ ವರ್ತನೆ ಮಾಡಿದರೆ ಲೈಮ್ ಲೈಟ್ ಅವರ ಮೇಲೆ ಬೀಳುತ್ತದೆ ಎಂಬುದು ಸೌಂದರ್ಯಾಗೆ ಗೊತ್ತು. ಸೌಂದರ್ಯಾ ಆಡುವ ಮಾತು, ಮಾಡುವ ಕಾರ್ಯ ಎಲ್ಲವೂ ಶೋ ಕುರಿತಾಗಿಯೇ ಆಗಿರುತ್ತದೆ. ಹೇಗೆ ವರ್ತಿಸಿದರೆ ನನ್ನ ಶಾಟ್ ಪ್ರೋಮೊನಲ್ಲಿ ಬರುತ್ತದೆ. ಯಾವ ರೀತಿ ಮಾತನಾಡಿದರೆ ನನ್ನ ‘ಸೀನ್’ ಎಪಿಸೋಡಿನಲ್ಲಿ ಬರುತ್ತದೆ ಎಂಬುದು ಸೌಂದರ್ಯಾಗೆ ಗೊತ್ತು ಅವರು ಹಾಗೆಯೇ ವರ್ತನೆ ಮಾಡುತ್ತಾರೆ’ ಎಂದು ಪ್ರಶಾಂತ್ ಹೇಳಿದ. ಅದಕ್ಕೆ ಅಲ್ಲಿದ್ದ ಎಲ್ಲರೂ ಒಪ್ಪಿಗೆ ಸೂಚಿಸಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್: ವಿಡಿಯೋ
ಗಗನ್ ಮಾತನಾಡಿ, ‘ಆಸಿಯಾ, ನನಗೆ ಹೊಡೆದಳು ಎಂದು ಜಗಳಕ್ಕೆ ಹೋಗಿದ್ದಾಳೆ. ಎಲ್ಲರಿಗೂ ಗೊತ್ತಿದೆ ಆಸಿಯಾ ಹೊಡೆದಿಲ್ಲ ಅದೇ ತಾಗಿದ್ದು ಎಂದು. ಅಲ್ಲದೆ ಆಸಿಯಾ ಯಾರನ್ನಾದರೂ ಹೊಡೆಯುವ ಹುಡುಗಿಯೂ ಅಲ್ಲ. ಆದರೆ ಸೌಂದರ್ಯಾ ಬೇಕೆಂದೇ ಜಗಳ ದೊಡ್ಡದು ಮಾಡಿದಳು’ ಎಂದರು. ಇನ್ನು ಟಾಸ್ಕ್ ವೇಳೆ ಧನುಶ್ ಸಹ ಸೌಂದರ್ಯಾ ಅನ್ನು ‘ಪೆದ್ದು ಗುಂಡಿ’ ಎಂದೆಲ್ಲ ರೇಗಿಸಿ, ಟೀಕೆ ಮಾಡಿದರು. ಮೊದಲೆಲ್ಲ ಸೌಂದರ್ಯಾ ಎಂದರೆ ಒಳ್ಳೆಯ ಫ್ರೆಂಡ್, ಜಾಲಿ ಹುಡುಗಿ ಎಂಬ ಅಭಿಪ್ರಾಯ ಮನೆಯಲ್ಲಿ ಇತ್ತು. ಆದರೆ ಇತ್ತೀಚೆಗೆ ಮನೆ ಮಂದಿಗೆ ಸೌಂದರ್ಯಾ ಮೇಲೆ ಅಭಿಪ್ರಾಯ ಬದಲಾಗಿದೆ. ಅದಕ್ಕೆ ನಿನ್ನೆ ಆದ ಚರ್ಚೆಯೇ ಉದಾಹರಣೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

