ಶ್ರೀನಗರ: ದಶಕಗಳಿಂದ ಭಯೋತ್ಪಾದನೆಯ ನೆರಳಿನಲ್ಲಿದ್ದ ಕಾಶ್ಮೀರ ಕಣಿವೆ ಈಗ ಸಂಪೂರ್ಣವಾಗಿ 'ಸ್ಥಳೀಯ ಉಗ್ರರಿಂದ ಮುಕ್ತವಾಗಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ (ನ.19) ಅಧಿಕೃತವಾಗಿ ಘೋಷಿಸಿದ್ದಾರೆ.

ಇತ್ತೀಚೆಗೆ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೈಬಾ ಉಗ್ರ ಲತೀಫ್ ಭಟ್‌ನನ್ನು ಹೊಡೆದುರುಳಿಸಿದ ಬೆನ್ನಲ್ಲೇ ಈ ಮಹತ್ವದ ಸುದ್ದಿ ಹೊರಬಿದ್ದಿದೆ.

ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಭಯೋತ್ಪಾದನಾ ವಿರೋಧಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಇದೊಂದು "ಪ್ರಮುಖ ಮೈಲಿಗಲ್ಲು, 35 ವರ್ಷಗಳ ನಂತರ ಭಾರತದಲ್ಲಿಯೇ ಹುಟ್ಟಿದ ಭಯೋತ್ಪಾದಕರಿಂದ ಕಾಶ್ಮೀರವು ಮುಕ್ತವಾಗಿದೆ ಎಂದು ತಿಳಿಸಿದರು. ಅಲ್ಲದೆ, ದೇಶದ ಭಯೋತ್ಪಾದನಾ ನಿಗ್ರಹ ನೀತಿಯಲ್ಲಿ "ಮುಂಜಾಗ್ರತಾ ಕ್ರಮಗಳನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ನಾವು ಇಡೀ ಭಯೋತ್ಪಾದಕ ಜಾಲದ ಮೇಲೆ ಸಮನ್ವಯಯುತ ಹಾಗೂ ಸಮಗ್ರ ರೀತಿಯಲ್ಲಿ ದಾಳಿ ನಡೆಸದ ಹೊರತು ಯಶಸ್ಸನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು. ಭಯೋತ್ಪಾದನೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಅನುಸರಿಸುತ್ತಿರುವ 'ಶೂನ್ಯ ಸಹಿಷ್ಣುತೆ' (zero-tolerance) ನೀತಿಯು ವಾಸ್ತವ ನೆಲೆಯಲ್ಲಿ ನಿರ್ಣಾಯಕ ಫಲಿತಾಂಶಗಳನ್ನು ನೀಡಿದೆ ಎಂದು ಅಮಿತ್ ಶಾ ಶ್ಲಾಘಿಸಿದರು.

'ಕೆಲವು ಲೆಕ್ಕಾಚಾರಗಳನ್ನು ತಣ್ಣಗೇ ಮುಗಿಸಬೇಕು': ಉಗ್ರ ಲತೀಫ್ ಭಟ್ ಎನ್ಕೌಂಟರ್ ಬೆನ್ನಲ್ಲೇ CRPF ಮುಖ್ಯಸ್ಥರ ಪೋಸ್ಟ್ ವೈರಲ್!

ಬುಧವಾರ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು 15 ಲಕ್ಷ ರೂಪಾಯಿ ಬಹುಮಾನ ಘೋಷಿತ ಉಗ್ರ ಲತೀಫ್ ಭಟ್‌ನನ್ನು ಗುಂಡಿಕ್ಕಿ ಕೊಂದಿಹಾಕಿದ್ದಾರೆ. ನವೆಂಬರ್ 11ರಂದು ಸಿಆರ್‌ಪಿಎಫ್ ಚೆಕ್​ ಪೋಸ್ಟ್​ ಮೇಲೆ ನಡೆದ ದಾಳಿಯಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ ಹಿನ್ನಲೆ ಈ ಕಾರ್ಯಾಚರಣೆ ನಡೆಸಲಾಗಿತ್ತು.

ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕಲು ರಾಜ್ಯ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ನಡುವಿನ ಸಮನ್ವಯ ಬಹಳ ಮುಖ್ಯ ಎಂದು ಶಾ ತಿಳಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧ ನಡೆದ ಕಾರ್ಯಾಚರಣೆಯನ್ನು ನೆನಪಿಸಿಕೊಂಡ ಅವರು, 11 ರಾಜ್ಯಗಳ ಪೊಲೀಸರು ಮತ್ತು ಕೇಂದ್ರ ಸಂಸ್ಥೆಗಳು ಸೇರಿ ಒಂದೇ ರಾತ್ರಿಯಲ್ಲಿ ಪಿಎಫ್‌ಐ ಜಾಲವನ್ನು ಪುಡಿಗಟ್ಟಿದವು. ಇದು ಇಡೀ ಜಗತ್ತಿಗೇ ಒಂದು ಮಾದರಿ ಕಾರ್ಯಾಚರಣೆಯಾಗಿದೆ" ಎಂದಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಡಿರುವ ಅಪರಾಧ ಜಾಲಗಳ ವಿರುದ್ಧ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳನ್ನು ಉಲ್ಲೇಖಿಸಿದ ಅವರು, 2019 ರಿಂದೀಚೆಗೆ ಸಿಬಿಐ (CBI), ಕೇಂದ್ರ ಗೃಹ ಸಚಿವಾಲಯ ಮತ್ತು ಗುಪ್ತಚರ ಸಂಸ್ಥೆಗಳ ಪ್ರಯತ್ನದ ಫಲವಾಗಿ 36 ದೇಶಗಳಿಂದ 303 ಪರಾರಿಯಾದ ಅಪರಾಧಿಗಳನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ ಎಂದು ತಿಳಿಸಿದರು.

ಭಾರತವು ದೀರ್ಘಕಾಲದಿಂದ ಭಯೋತ್ಪಾದನೆಯ ಬಲಿಪಶುವಾಗಿದೆ ಮತ್ತು ಹಿಂಸಾಚಾರವನ್ನು ಎದುರಿಸುತ್ತಾ ಬಂದಿದೆ ಎಂದು ಹೇಳಿದ ಅಮಿತ್ ಶಾ, ಆದರೆ ವಿವಿಧ ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ಸಮನ್ವಯಯುತ ಕ್ರಮಗಳ ಕೊರತೆ ಎದ್ದು ಕಾಣುತ್ತಿತ್ತು ಎಂದು ಅಭಿಪ್ರಾಯಪಟ್ಟರು.