ಬೆಂಗಳೂರು, ನವೆಂಬರ್ 19: ರಾಜ್ಯದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ವಿಚಾರವಾಗಿ ನಡೆಯುತ್ತಿರುವ ವಿವಾದ ಇದೀಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ. ಎಥೆನಾಲ್ ಮಿಶ್ರಣದ ಪ್ರಮಾಣ, ವಾಹನಗಳ ಮೇಲಿನ ಪರಿಣಾಮ ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿನ ಇಂಧನ ವಿತರಣೆಯ ಬಗ್ಗೆ ಹಲವು ಆರೋಪಗಳನ್ನು ಮಾಡಿರುವ ಸಚಿವ ರಿಜ್ವಾನ್ ಅರ್ಷದ್, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ. ಎಥೆನಾಲ್ ಮಿಶ್ರಣದ ವಿಚಾರದಲ್ಲಿ ಗ್ರಾಹಕರ ಹಿತ ಕಾಪಾಡಲು ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿಧ ಪೆಟ್ರೋಲ್ ಬಂಕ್‌ಗಳಿಂದ ಇಂಧನದ ಮಾದರಿಗಳನ್ನು ಸಂಗ್ರಹಿಸಿ ಎನ್​ಎಬಿಎಲ್ (NABL) ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ 14 ಮಾದರಿಗಳ ಪೈಕಿ 11 ಮಾದರಿಗಳಲ್ಲಿ ಶೇ 20ಕ್ಕಿಂತ ಹೆಚ್ಚು ಎಥೆನಾಲ್ ಪತ್ತೆಯಾಗಿದ್ದು, ಗರಿಷ್ಠ ಶೇ 31.2ರಷ್ಟು ಎಥೆನಾಲ್ ಇರುವುದು ದೃಢಪಟ್ಟಿದೆ ಎಂದು ರಿಜ್ವಾನ್ ಅರ್ಷದ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಶೇ 90ರಷ್ಟು ಪೆಟ್ರೋಲ್ ಬಂಕ್‌ಗಳ ನಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಗ್ರಾಹಕರಿಗೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನ ಸಿಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಕೇಂದ್ರಕ್ಕೆ ರಿಜ್ವಾನ್ ಅರ್ಷದ್ ಮುಂದಿಟ್ಟ ಐದು ಬೇಡಿಕೆಗಳು

ಎಥೆನಾಲ್ ಮಿಶ್ರಣದ ಪ್ರಮಾಣದ ಬಗ್ಗೆ ಗ್ರಾಹಕರಿಗೆ ಪಾರದರ್ಶಕ ಮಾಹಿತಿ ನೀಡಬೇಕು ಎಂಬುದು ಸಚಿವರ ಪ್ರಮುಖ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಪ್ರದರ್ಶಿಸಬೇಕು. ಗ್ರಾಹಕರಿಗೆ ನೀಡುವ ಬಿಲ್‌ನಲ್ಲೂ ಎಥೆನಾಲ್ ಪ್ರಮಾಣವನ್ನು ನಮೂದಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದರ ಜತೆಗೆ, ಕಡಿಮೆ ಎಥೆನಾಲ್ ಮಿಶ್ರಣವಿರುವ E-10 ಇಂಧನ ಆಯ್ಕೆಗೆ ಗ್ರಾಹಕರಿಗೆ ಅವಕಾಶ ನೀಡಬೇಕು. NABL ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಸ್ವತಂತ್ರವಾಗಿ ಇಂಧನ ಪರೀಕ್ಷೆ ನಡೆಸುವ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಥೆನಾಲ್ ಮಿಶ್ರಿತ ಇಂಧನ ಬಳಕೆಯಿಂದ ವಾಹನಗಳಿಗೆ ಹಾನಿಯಾದರೆ ಗ್ರಾಹಕರಿಗೆ ಪರಿಹಾರ ನೀಡಬೇಕು. ಇದಕ್ಕಾಗಿ ಪ್ರತ್ಯೇಕ ಪರಿಹಾರ ನಿಧಿ ರಚಿಸಬೇಕು ಎಂಬ ಬೇಡಿಕೆಯನ್ನೂ ಕೇಂದ್ರದ ಮುಂದಿಟ್ಟಿದ್ದಾರೆ.

ಎಥೆನಾಲ್‌ನಿಂದ ವಾಹನಗಳಿಗೆ ಹಾನಿಯಾಗಿಲ್ಲ: ನಿತಿನ್ ಗಡ್ಕರಿ ತಿರುಗೇಟು

ಇನ್ನೊಂದೆಡೆ, ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಎಂಬ ಆರೋಪಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿರುಗೇಟು ನೀಡಿದ್ದಾರೆ. ಎಥೆನಾಲ್ ಬಳಕೆಯಿಂದ ಯಾವುದೇ ವಾಹನ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈ ಸಂಬಂಧ ನಡೆಯುತ್ತಿರುವ ಅಭಿಯಾನಗಳು ಪೇಯ್ಡ್ ಕ್ಯಾಂಪೇನ್‌ಗಳಾಗಿವೆ ಎಂದು ಆರೋಪಿಸಿದ್ದಾರೆ.

2022ರಿಂದ ದೇಶದಲ್ಲಿ ಸುಮಾರು ನಾಲ್ಕು ಕೋಟಿ ನಾಲ್ಕು ಚಕ್ರದ ವಾಹನಗಳು ಹಾಗೂ 20 ಕೋಟಿ ದ್ವಿಚಕ್ರ ವಾಹನಗಳು ಇ-20 ಇಂಧನದಲ್ಲಿ ಸಂಚರಿಸುತ್ತಿವೆ ಎಂದು ಗಡ್ಕರಿ ಹೇಳಿದ್ದಾರೆ. ಕಳೆದ ಮೂರು-ನಾಲ್ಕು ತಿಂಗಳಿನಿಂದ ವಾಹನಗಳು ಹಾಳಾಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಥೆನಾಲ್ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ಆದರೆ, ಈಗ ವಾಹನಗಳಿಗೆ ಯಾವುದೇ ಹಾನಿಯಾಗುತ್ತಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಸ್ಯಾಂಪಲ್ ಸಂಗ್ರಹದ ವಿಚಾರವಾಗಿ ರಿಜ್ವಾನ್‌ಗೆ ನಿರಾಣಿ ಪ್ರಶ್ನೆ

ಎಥೆನಾಲ್ ವಿವಾದದ ಬಗ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಕೂಡ ಪ್ರತಿಕ್ರಿಯಿಸಿದ್ದು, ರಿಜ್ವಾನ್ ಅರ್ಷದ್ ಅವರ ಆರೋಪಗಳೇ ಅವರಿಗೆ ತಿರುಗುಬಾಣವಾಗಲಿವೆ ಎಂದು ಟೀಕಿಸಿದ್ದಾರೆ. ಇಂಧನದ ಮಾದರಿಗಳನ್ನು ಯಾರ ಸಮಕ್ಷಮದಲ್ಲಿ ಸಂಗ್ರಹಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ರಿಜ್ವಾನ್ ಅರ್ಷದ್, 63 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಇಂಧನದಲ್ಲಿ ಮಿಶ್ರಣ ಮಾಡಿ ಹಣ ಪಡೆಯುತ್ತಿರುವವರ ವಿರುದ್ಧವೂ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್​ನಲ್ಲಿ ಹೆಚ್ಚಿನ ಎಥೆನಾಲ್ ಮಿಶ್ರಣ ಆರೋಪ‌: ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ರಿಜ್ವಾನ್ ಅರ್ಷದ್​​ ಪತ್ರ

ಒಟ್ಟಿನಲ್ಲಿ, ಎಥೆನಾಲ್ ಮಿಶ್ರಣದ ಪ್ರಮಾಣ ಮತ್ತು ವಾಹನಗಳ ಮೇಲಿನ ಪರಿಣಾಮದ ಕುರಿತ ವಿವಾದ ಇದೀಗ ರಾಜಕೀಯ ಆರೋಪ-ಪ್ರತ್ಯಾರೋಪಗಳ ಸ್ವರೂಪ ಪಡೆದುಕೊಂಡಿದೆ. ರಿಜ್ವಾನ್ ಅರ್ಷದ್ ಅವರ ಐದು ಬೇಡಿಕೆಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ