ಹುಬ್ಬಳ್ಳಿ: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿದ ಆರೋಪದ ಮೇಲೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ನಗರ ಘಟಕ 1ರಲ್ಲಿ ಚಾಲಕ/ನಿರ್ವಾಹಕರಾಗಿರುವ ಷಡಕ್ಷರಯ್ಯ ಅತ್ತಿಕಟ್ಟಿಮಠ ಅವರ ಮನೆ ಮೇಲೆ ಬುಧವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

ಗೋಕುಲ ರಸ್ತೆಯ ಲೋಹಿಯಾ ನಗರದ ಗಾಂಧಿನಗರದಲ್ಲಿ ಇರುವ ಅವರ ಮನೆ, ಪಕ್ಕದ ಮನೆ ಮತ್ತು ಪಕ್ಕದ ರಸ್ತೆಬದಿಯಲ್ಲಿ ಇರುವ, ಅವರಿಗೆ ಸಂಬಂಧಿಸಿದ ಮತ್ತೊಂದು ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು.

ಆದಾಯ ಮತ್ತು ಸಂಪಾದಿತ ಆಸ್ತಿಗಳ ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಸಂಜೆವರೆಗೂ ನಡೆಯಿತು.

ಅಧಿಕಾರಿಗಳು ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡರು. ಮನೆಯಲ್ಲಿ ಪತ್ತೆಯಾದ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳ ಮೌಲ್ಯಮಾಪನ ನಡೆಸಿದರು. ಪ್ರಾಥಮಿಕ ಮಾಹಿತಿ ಪ್ರಕಾರ, ಷಡಕ್ಷರಯ್ಯ ಅವರ ಹೆಸರಲ್ಲಿ ಮೂರು ಮನೆಗಳು ಇರುವುದು ಗೊತ್ತಾಗಿದೆ.

ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಡಿವೈಎಸ್‌ಪಿಗಳಾದ ಎಂ.ಎಸ್.ಪಾಟೀಲ ಮತ್ತು ಬಸವರಾಜ ಬುದ್ನಿ ಸೇರಿ 15 ಮಂದಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಆರೋಪ: ‘ಷಡಕ್ಷರಯ್ಯ ಅವರು ತಮಗೆ ಬರುವ ವೇತನಕ್ಕಿಂತ ಹಲವು ಪಟ್ಟು ಹೆಚ್ಚಿನ ಆಸ್ತಿ ಸಂಪಾದಿಸಿದ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಆಗಿತ್ತು. ಸರ್ಕಾರಿ ನೌಕರರಾಗಿದ್ದರೂ ನಿಯಮಗಳನ್ನು ಮೀರಿ ಪತ್ನಿ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿ, ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು’ ಎಂದು ಮೂಲಗಳು ತಿಳಿಸಿವೆ.