ಬೆಂಗಳೂರು: ‘ರಾಜ್ಯದ 80 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಡಿಸೆಂಬರ್‌ 31ರ ಒಳಗೆ ಇ-ಸ್ವತ್ತು ನೀಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ರಾಜ್ಯದಲ್ಲಿ 1.50 ಕೋಟಿ ಗ್ರಾಮೀಣ ಆಸ್ತಿ ಇದ್ದು, ಈಗಾಗಲೇ 42.92 ಲಕ್ಷ ಆಸ್ತಿಗಳಿಗೆ ನಮೂನೆ–11 ಹಾಗೂ 10.16 ಲಕ್ಷ ಸ್ವತ್ತುಗಳಿಗೆ ನಮೂನೆ–ಬಿ ವಿತರಿಸಲಾಗಿದೆ. ಇನ್ನೂ 97.59 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು ನೀಡಬೇಕಿದೆ. 5,927 ಗ್ರಾಮ ಪಂಚಾಯತಿಗಳಿಗೂ ಗುರಿ ನಿಗದಿಪಡಿಸಲಾಗಿದೆ’ ಎಂದರು. 

‘ರಾಜ್ಯದಲ್ಲಿ ಶೇ 61ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದು, ಇ-ಸ್ವತ್ತು ಪಡೆಯುವಲ್ಲಿ ಸಾಕಷ್ಟು ವಿಳಂಬ ಆಗುತ್ತಿತ್ತು. ಈ ತೊಡಕು ನಿವಾರಿಸಲು ಐವರು ಸದಸ್ಯರ ಸಮಿತಿ ರಚಿಸಿ, ಸಮಿತಿಯ ಶಿಫಾರಸಿನಂತೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು– 2025ಕ್ಕೆ ತಿದ್ದುಪಡಿ ತರಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕಂದಾಯ ಭೂಮಿಯಲ್ಲಿ ಅಭಿವೃದ್ಧಿಪಡಿಸಲಾದ ಪರಿವರ್ತನೆ ಆದ ಭೂಮಿ ಮತ್ತು ಪರಿವರ್ತನೆ ಆಗದ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೂ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗಿದೆ. ಮೊದಲ ಹಂತದಲ್ಲಿ ಪರಿವರ್ತನೆ ಆದ ಭೂಮಿಯಲ್ಲಿ ಅಭಿವೃದ್ಧಿ ಪಡಿಸಲಾದ ಬಿ–ಖರಾಬು ಭೂಮಿ ಇಲ್ಲದ ಸರ್ವೆ ನಂಬರ್‌ ಸ್ವತ್ತುಗಳಿಗೆ ಇ-ಸ್ವತ್ತು ನೀಡಲಾಗುವುದು. ನಿಯಮ ಬದಲಾವಣೆ ನಂತರ ಭೂಪರಿವರ್ತನೆ ಆಗದ ಭೂಮಿಯತ್ತ ಗಮನ ಹರಿಸಲಾಗುವುದು’ ಎಂದರು.

ಮೋಜಣಿ: ‘ಪ್ರತ್ಯೇಕ ವಿಭಾಗಕ್ಕೆ ಚಿಂತನೆ’

ಗ್ರಾಮೀಣ ಪ್ರದೇಶದ ಜಮೀನುಗಳ ಸರ್ವೆಯಲ್ಲೂ ಸಮಸ್ಯೆ ಇದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿಯೇ ಪ್ರತ್ಯೇಕ ಮೋಜಣಿ ವಿಭಾಗ ಆರಂಭಿಸುವ ಚಿಂತನೆ ಇದೆ ಎಂದು ಈಶ್ವರ ಖಂಡ್ರೆ ಹೇಳಿದರು.

‘ಸಿಬ್ಬಂದಿಗೆ ತರಬೇತಿ ನೀಡಿ ರೋವರ್‌ಗಳ ಮೂಲಕ ಸರ್ವೆ ಮಾಡಲು ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ಇದನ್ನು ಶೀಘ್ರವೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು’ ಎಂದು ತಿಳಿಸಿದರು.

‘ಇ-ಸ್ವತ್ತು ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಇ-ಸ್ವತ್ತು–2 ತಂತ್ರಾಂಶ ಜಾರಿಯಲ್ಲಿದೆ. ಆದರೆ, ಎಲ್ಲ ಗ್ರಾಮೀಣ ಆಸ್ತಿಗಳನ್ನೂ ಸುರಕ್ಷಿತವಾಗಿಸಲು ಮತ್ತು ಸರ್ಕಾರಿ ಆಸ್ತಿಗೆ, ಬಿ–ಖರಾಬು ಭೂಮಿಗೆ ಇ-ಸ್ವತ್ತು ನೀಡುವುದನ್ನು ತಡೆಯಲು ಕಂದಾಯ ಇಲಾಖೆಯ ತಂತ್ರಾಂಶದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯುವಂತೆ ಇ-ಸ್ವತ್ತು–3 ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಸ್ಥಿರಾಸ್ತಿ ಮಾರ್ಗಸೂಚಿ ಶೀಘ್ರ ಪರಿಷ್ಕರಣೆ’

‘ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಪರಿಷ್ಕರಿಸುವ ಕುರಿತು ಚರ್ಚೆ ನಡೆದಿದೆ’ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ತಿಳಿಸಿದರು.

‘ಖಾಸಗಿ ಮಾರುಕಟ್ಟೆಯಲ್ಲಿ ಭೂಮಿಯ ಮೌಲ್ಯ ಗಣನೀಯವಾಗಿ ಏರಿಕೆಯಾಗಿದೆ. ಉದಾಹರಣೆಗೆ, ಸರ್ಕಾರದ ಮಾರ್ಗಸೂಚಿ ಮೌಲ್ಯದಲ್ಲಿ ಎಕರೆಗೆ ₹5 ಕೋಟಿ ಇದ್ದರೆ, ಖಾಸಗಿ ಮಾರುಕಟ್ಟೆಯಲ್ಲಿ ಅದರ ಮೌಲ್ಯ ₹20 ಕೋಟಿಯವರೆಗೂ ಇರಬಹುದು. ಇಂತಹ ಪ್ರಕರಣಗಳಲ್ಲಿ ಸರ್ಕಾರಕ್ಕೆ ಆದಾಯ
ನಷ್ಟವಾಗುತ್ತಿದೆ’ ಎಂದರು.

‘ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮಾರ್ಗಸೂಚಿ ಮೌಲ್ಯವನ್ನು ಪರಿಷ್ಕರಿಸಲು ವಿಶ್ಲೇಷಣೆ ನಡೆಯುತ್ತಿದೆ. ವಿಶ್ಲೇಷಣೆ ಪೂರ್ಣಗೊಂಡ ಬಳಿಕ, ಯಾವ ಪ್ರದೇಶದಲ್ಲಿ ಎಷ್ಟು ಹೆಚ್ಚಳ ಮಾಡಬೇಕು ಎಂಬುದನ್ನು ಪ್ರದೇಶವಾರು ನಿರ್ಧರಿಸಲಾಗುವುದು. ಬೆಂಗಳೂರು ನಗರದಲ್ಲಿ ಬಿಬಿಎಂಪಿ ವ್ಯಾಪ್ತಿಯ ಪ್ರದೇಶಗಳಿಗೆ ಅನುಗುಣವಾಗಿ ಹಾಗೂ ಇತರ ಜಿಲ್ಲೆಗಳಲ್ಲಿ ತಾಲ್ಲೂಕು ಅಥವಾ ಪಂಚಾಯಿತಿ ಮಟ್ಟದಲ್ಲಿ ಮಾರ್ಗಸೂಚಿ ಮೌಲ್ಯ ಪರಿಷ್ಕರಿಸುವ ಉದ್ದೇಶವಿದೆ’ ಎಂದರು.