ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಅಡಿಯಲ್ಲಿ ಬರುವ ಪೋಷಕರ ವಾರ್ಷಿಕ ಆದಾಯದ ಮಿತಿಯನ್ನು ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಯುಪಿಎ ಸರ್ಕಾರ 2009ರಲ್ಲಿ ಜಾರಿಗೆ ತಂದಿದ್ದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ, ದುರ್ಬಲ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅಂತಹ ಪೋಷಕರ ವಾರ್ಷಿಕ ಆದಾಯದ ಮಿತಿಯನ್ನು ₹3.5 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಕುಟುಂಬಗಳ ಆದಾಯ ಹೆಚ್ಚಳವಾಗಿದ್ದು, ಹಲವು ಕುಟುಂಬಗಳ ಮಕ್ಕಳಿಗೆ ಯೋಜನೆಯ ಪ್ರಯೋಜನ ಸಿಗುತ್ತಿರಲಿಲ್ಲ. ಆದಾಯದ ಮಿತಿ ಹೆಚ್ಚಿಸುವಂತೆ ಪೋಷಕರು ಮನವಿ ಮಾಡಿದ್ದರು. ಪ್ರಸ್ತುತ ಗುಜರಾತ್ನಲ್ಲಿ ₹6 ಲಕ್ಷ ಹಾಗೂ ದೆಹಲಿಯಲ್ಲಿ ₹5 ಲಕ್ಷ ಆದಾಯ ಮಿತಿ ಇದ್ದು, ದಕ್ಷಿಣದ ರಾಜ್ಯಗಳಲ್ಲಿ ಆದಾಯ ಮಿತಿ ಕಡಿಮೆ ಇದೆ.
ಆರ್ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಆರ್ಥಿಕವಾಗಿ ದುರ್ಬಲ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಮೀಸಲಿಡುವುದು ಕಡ್ಡಾಯ. ಈ ಮಕ್ಕಳ ಶಿಕ್ಷಣದ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ.

