ಬೆಂಗಳೂರು: ‘ಮೈಸೂರಿನ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚಿತ್ರನಗರಿ ಯೋಜನೆಗೆ ಸಚಿವ ಸಂಪುಟದ ಒಪ್ಪಿಗೆ ದೊರೆತಿದ್ದು, ಸದ್ಯದಲ್ಲೇ ಆದೇಶ ಹೊರಬೀಳಲಿದೆ’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್ ಹೇಳಿದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ 'ಮಹಿಳಾ ಸಿನಿ ಸಂವಾದ' ಒಂದು ದಿನದ ಚಲನಚಿತ್ರ ನಿರ್ಮಾಣ ಕುರಿತ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಚಿತ್ರನಗರಿ ನಿರ್ಮಾಣಕ್ಕೆ‌ ಮೈಸೂರುಹೊರವಲಯದ ನಂಜನಗೂಡು ರಸ್ತೆಯಲ್ಲಿ 160 ಎಕರೆ ಜಾಗ ಮೀಸಲಿಟ್ಟಿದ್ದುಮೂರು ವರ್ಷಗಳಲ್ಲಿ ಪೂರ್ಣಗೊಳ್ಳ ಲಿದೆ. ಚಿತ್ರೀಕರಣಕ್ಕೆ ಬೇಕಾದ ಲೋಕೆಷನ್ಸ್ ಜತೆಗೆ ತಾರಾ ಹೋಟೆಲ್, ಸ್ಟುಡಿಯೊ ನಿರ್ಮಾಣವಾಗಲಿದೆ. ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಕೂಡ ಆರಂಭವಾಗಲಿದೆ. ಆದರೆ, ಚಿತ್ರನಗರಿ ಮೂರು ವರ್ಷದ ಯೋಜನೆ ಆಗಿರುವುದರಿಂದ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ ಅನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲೇ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಮಾತನಾಡಿ, 'ಹೆಣ್ಣಿಗೆ ಅವಕಾಶ ಕೊಡಬೇಕು. ಆಕೆಗೆ ಅವಕಾಶ ನೀಡಿದರೆ ಏನು ಬೇಕಾದರೂ ಸಾಧನೆ ಮಾಡಬಲ್ಲಳು. ಹೆಣ್ಣಿಗೆ ಅವಕಾಶ ಸಿಕ್ಕಿದರೆ ಸಾಲದು, ನಾಯಕತ್ವ ನೀಡಬೇಕು. ಮಹಿಳೆಯರಿಗಾಗಿಯೇ ಒಂದು ತರಬೇತಿ ಸಂಸ್ಥೆಯ ಅವಶ್ಯಕತೆ ಇದೆ’ ಎಂದರು.

ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್‌ ಮಾತನಾಡಿ, 'ನಮ್ಮೆಲ್ಲರಲ್ಲೂ ಒಬ್ಬ ಕತೆಗಾರರಿದ್ದಾರೆ. ಮಹಿಳೆ ತೆರೆಯ ಮುಂದೆ ಅಷ್ಟೇ ಅಲ್ಲ, ತೆರೆಯ ಹಿಂದೆಯೂ ಸಾಕಷ್ಟು ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶವಿದೆ. ನಿಮಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ, ಅದರಲ್ಲಿ ಮುಂದೆ ಸಾಗಿ' ಎಂದು ಶಿಬಿರಾರ್ಥಿಗಳಿಗೆ ಹೇಳಿದರು.

ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮಾತನಾಡಿ, 'ಪ್ರತಿ ಸಿನಿಮಾದ ತೆರೆಯ ಹಿಂದಿನ ಕೆಲಸಗಳಲ್ಲಿ ಮಹಿಳೆಗಾಗಿ ಒಂದು ಸ್ಥಾನ ನೀಡಬೇಕು' ಎಂದರು. ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್‌ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮಜುಂದಾರ್‌ ಸ್ವಾಗತಿಸಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಅಕಾಡೆಮಿ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

261119-4-1631013276