ಬೆಂಗಳೂರು: ‘ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಚಟುವಟಿಕೆಗಳನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ’ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಇಂಡಿಯನ್ ಎಕಾನಮಿ ಈಸ್ ಎ ಡೆಡ್ ಎಕಾನಮಿ ಎಂದಿರುವ ಇಟಲಿಯಿಂದ ಜನರನ್ನು ಕರೆಯಿಸಿ ದೇಶವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಈ ದೇಶದಲ್ಲಿ ಯಾವಾಗ ಅರಾಜಕತೆ ಸೃಷ್ಟಿ ಮಾಡಬೇಕೆಂದು ಅನಿಸುತ್ತೋ, ಆಗ ಹೊರದೇಶದವರ ಒಟ್ಟಿಗೆ ಹೋಗಿ ಚರ್ಚೆ ಮಾಡುತ್ತಾರೆ. ದೇಶವಿರೋಧಿ ಚಟುವಟಿಕೆಗಳಿಗೆ ಹೊರದೇಶದಲ್ಲಿ ಕುಳಿತಿರುವ ಭಾರತ ವಿರೋಧಿಗಳಿಂದ ಸಲಹೆ ಸೂಚನೆಗಳನ್ನು ಹೊತ್ತು ತರುತ್ತಿದ್ದಾರೆ’ ಎಂದು ಟೀಕಿಸಿದರು.
‘ಕೇಂದ್ರ ಸರ್ಕಾರ ಒಮ್ಮೆಲೇ ಅವರ ಮೇಲೆ ಕ್ರಮ ಜರುಗಿಸಿದರೆ ಅದಕ್ಕೆ ಅರ್ಥ ಬರುವುದಿಲ್ಲ. ಅವರು ಯಾವ ಯಾವ ತಪ್ಪುಗಳನ್ನು ಮಾಡುತ್ತಿದ್ದಾರೋ, ಯಾವ ರೀತಿ ಗಂಡಾಂತರ ತಂದೊಡ್ಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೋ ಅವೆಲ್ಲ ಈ ದೇಶದ ಜನರಿಗೆ ಗೊತ್ತಾಗಬೇಕು. ಆಗ ದೇಶವಾಸಿಗಳು ಕೂಡ ಅವರಿಗೆ ಬುದ್ಧಿ ಕಲಿಸಲಿದ್ದಾರೆ’ ಎಂದು ಹೇಳಿದರು.
261119-51-2033273441

