ಬೆಂಗಳೂರು: ‘ರಾಜ್ಯದಲ್ಲಿ ನವೋದ್ಯಮ ಗಳಿಗೆ ಉತ್ತೇಜನ ನೀಡುವ ಸಲುವಾಗಿ ಬೆಂಗಳೂರು ಸಮೀಪ 1,000 ಎಕರೆ ಮತ್ತು ಹುಬ್ಬಳ್ಳಿ–ಧಾರವಾಡ ಸಮೀಪ 100–200 ಎಕರೆ ವಿಸ್ತೀರ್ಣದ ನವೋದ್ಯಮ ಪಾರ್ಕ್‌ಗಳನ್ನು ಸ್ಥಾಪಿಸಲಾಗುವುದು’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಬುಧವಾರ ನವೋದ್ಯಮ ಸ್ಥಾಪಕರು ಮತ್ತು ಹೂಡಿಕೆದಾರರ ಜತೆ ಅವರು ಸಂವಾದ ನಡೆಸಿದರು. ಉದ್ಯಮಿಗಳ ಜತೆಗಿನ ಚರ್ಚೆಯ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

‘ನವೋದ್ಯಮಗಳು ಎದುರಿ ಸುತ್ತಿರುವ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಉದ್ಯಮಿಗಳು ಗಮನ ಸೆಳೆದರು. ಬೆಂಗಳೂರಿನಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ್ದು, ಆದಷ್ಟು ಕಡಿಮೆ ಬೆಲೆಗೆ ಭೂಮಿ ಕೊಡಿಸಿದರೆ ಅನುಕೂಲ ವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು’ ಎಂದರು.

‘ರಾಜ್ಯದಲ್ಲಿ ನಾಲ್ಕು ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಕಚೇರಿ ಹೊಂದಿವೆ. ಈ ಕಂಪನಿಗಳು ತಿಂಗಳಿಗೆ ನೂರಕ್ಕೂ ಹೆಚ್ಚು ವಾಹನಗಳನ್ನು ಮಾರಾಟ ಮಾಡುತ್ತವೆ. ನಾಲ್ಕೂ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿನ್ಯಾಸ ಘಟಕಗಳನ್ನು ಬೆಂಗಳೂರಿನಲ್ಲಿಯೇ ಹೊಂದಿವೆ. ಆದರೆ, ಮೂರು ಕಂಪನಿಗಳ ತಯಾರಿಕಾ ಘಟಕಗಳು ಹೊರರಾಜ್ಯ ದಲ್ಲಿವೆ’ ಎಂದು ಹೇಳಿದರು.

‘ಒಂದು ಕಂಪನಿಯಷ್ಟೇ ರಾಜ್ಯದಲ್ಲಿ ತಯಾರಿಕೆ ಘಟಕ ಹೊಂದಿದೆ. ಭೂಮಿಯ ಬೆಲೆ ಹೆಚ್ಚು ಇರುವ ಕಾರಣಕ್ಕೇ ಮೂರು ಕಂಪನಿಗಳು ಹೊರ ರಾಜ್ಯದಲ್ಲಿ ಘಟಕ ಸ್ಥಾಪಿಸಿವೆ ಎಂಬುದು ಗೊತ್ತಾಯಿತು. ಇಂತಹ ಸಮಸ್ಯೆ ಬಗೆಹರಿಸಲು ರಾಜ್ಯದ ಎರಡು ಭಾಗಗಳಲ್ಲಿ ನವೋದ್ಯಮ ಪಾರ್ಕ್‌ ಸ್ಥಾಪಿಸುವ ಪ್ರಸ್ತಾವ ನಮ್ಮ ಮುಂದೆ ಇದೆ’ ಎಂದರು.

‘ಪ್ರತಿಯೊಂದಕ್ಕೂ ಉದ್ಯಮಿಗಳೇ ಹಣ ಹಾಕುವುದು ಕಷ್ಟವಾಗುತ್ತದೆ. ಉದ್ದೇಶಿತ ನವೋದ್ಯಮ ಪಾರ್ಕ್‌ಗಳಲ್ಲಿ ನಿವೇಶನಗಳನ್ನು ಲೀಸ್‌ ಕಂ ಸೇಲ್‌ ಮಾದರಿ ಅಥವಾ ಇತರೆ ಸ್ವರೂಪದಲ್ಲಿ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು. ಜತೆಗೆ ಬೆಂಗಳೂರಿನಿಂದಾಚೆಗೆ ನವೋದ್ಯಮ ಸ್ಥಾಪನೆಗೆ ಮುಂದಾಗುವವರಿಗೆ, ಇತರ ವಿನಾಯತಿ ಮತ್ತು ನೆರವುಗಳ ಜತೆಗೆ ಶೇ 5ರಷ್ಟು ಸಹಾಯಧನವನ್ನು ಹೆಚ್ಚುವರಿಯಾಗಿ ನೀಡುವ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ’ ಎಂದರು.

‘ಏಕಗವಾಕ್ಷಿ ವಿಸ್ತರಣೆ’

ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಈಗ 130 ಸೇವೆಗಳನ್ನು ಒದಗಿಸುವ ಗುರಿ ಇದೆ. ಈಗಾಗಲೇ 116 ಸೇವೆಗಳಲ್ಲಿ ಈ ವ್ಯವಸ್ಥೆ ಅಡಿ ತರಲಾಗಿದೆ. ಮುಂದಿನ ಒಂದು ತಿಂಗಳಲ್ಲಿ ಇನ್ನೂ 10–15 ಸೇವೆಗಳಿಗೆ ಏಕಗವಾಕ್ಷಿ ವಿಸ್ತರಿಸಲಾಗು ವುದು. ಈ ವ್ಯವಸ್ಥೆಯನ್ನು ನಿಜವಾದ ಅರ್ಥದಲ್ಲಿ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನವೋದ್ಯಮ ಉತ್ಪನ್ನಗಳ ಅನಾವರಣ

‘ರಾಜ್ಯದ ನವೋದ್ಯಮ ಪರಿಸರದಲ್ಲಿ ಮೂಡಿಬರುತ್ತಿರುವ ಉತ್ಪನ್ನಗಳು, ಇಲ್ಲಿನ ಆವಿಷ್ಕಾರಗಳ ವಿಸ್ತಾರವನ್ನು ಪ್ರತಿಬಿಂಬಿಸುತ್ತಿವೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ತಂತ್ರಜ್ಞಾನ ಶೃಂಗಸಭೆಯಲ್ಲಿ ಬುಧವಾರ ನಡೆದ, ‘ನವೋದ್ಯಮ ಉತ್ಪನ್ನ ಅನಾವರಣ 5.0’ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅಡಿ ನೆರವು ಪಡೆದು ನವೋದ್ಯಮಗಳು ಅಭಿವೃದ್ಧಿಪಡಿಸಿರುವ 50 ಉತ್ಪನ್ನಗಳನ್ನು ಅನಾವರಣ ಮಾಡಿದರು.

ಆರೋಗ್ಯ ಮತ್ತು ವೈದ್ಯಕೀಯ, ಹೋಟೆಲ್‌, ಗೇಮಿಂಗ್‌, ಮನೋರಂಜನೆ, ಡ್ರೋನ್‌, ಎಲೆಕ್ಟ್ರಾನಿಕ್ಸ್‌, ವಿದ್ಯುತ್ ಚಾಲಿತ ವಾಹನ, ಫಿನ್‌ಟೆಕ್‌, ಕೃಷಿ ಸಂಬಂಧಿ ಉತ್ಪನ್ನಗಳನ್ನು ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ‘ಸರ್ಕಾರವೇ ಮೊದಲು’ ಯೋಜನೆ ಅಡಿಯಲ್ಲಿ, ಬೆಂಗಳುರು ಜಲಮಂಡಳಿ ಮತ್ತು ಗೃಹ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಲು ಆಯ್ಕೆಯಾದ ನವೋದ್ಯಮ ಉತ್ಪನ್ನಗಳನ್ನು ಪರಿಚಯಿಸಿದರು.

261119-51-2070246662