ದಾವಣಗೆರೆ: ‘ಜಿಲ್ಲೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡುತ್ತೇನೆ. ರಾಜ್ಯದ ಹೃದಯ ಭಾಗದಲ್ಲಿ ನಡೆಸುವುದರಿಂದ ಸಮ್ಮೇಳನಕ್ಕೆ ನಿಜವಾದ ಅರ್ಥ ಬರುತ್ತದೆ’ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
‘ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವುದು ನೌಕರರ ಕರ್ತವ್ಯವೂ ಆಗಿದೆ. ಅಧಿಕಾರಿಗಳು ಇಂಗ್ಲಿಷ್ ವ್ಯಾಮೋಹ ಬಿಟ್ಟು ಎಲ್ಲರಿಗೂ ಅರ್ಥವಾಗುವಂತೆ ಕನ್ನಡದಲ್ಲೇ ಟಿಪ್ಪಣಿ, ಆದೇಶ ಬರೆಯಬೇಕು’ ಎಂದು ಸಲಹೆ ನೀಡಿದರು.
‘6ನೇ ಗ್ಯಾರಂಟಿಯಾಗಿ ಎನ್ಪಿಎಸ್ ಬದಲಿಗೆ ಒಪಿಎಸ್ ಜಾರಿಗೆ ಸರ್ಕಾರ ಬದ್ಧವಾಗಿದೆ. ನೊಂದವರ ಕಣ್ಣೀರು ಒರೆಸುವ ಕೆಲಸವನ್ನು ನೌಕರರು ಮಾಡಬೇಕು’ ಎಂದರು.
‘ಸರ್ಕಾರ ವಹಿಸಿದ ಕೆಲಸವನ್ನು ನಾವು (ನೌಕರರು) ಜವಾಬ್ದಾರಿಯುತವಾಗಿ ಮಾಡಬೇಕಿದೆ. ಬೆಂಗಳೂರಿನ ರೀತಿ ದಾವಣಗೆರೆಯೂ ಅಭಿವೃದ್ಧಿ ಕಾಣಬೇಕು. ಅದಕ್ಕಾಗಿ ಸವಾಲುಗಳನ್ನು ಮೀರಿ ಕೆಲಸ ಮಾಡುವುದು ಅವಶ್ಯ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸಾಹಿತ್ಯ ಆಲದಕಟ್ಟಿ ಅಭಿಪ್ರಾಯಪಟ್ಟರು.
ಶಾಸಕ ಸಮರ್ಥ್ ಶಾಮನೂರು ಮಾತನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಎಸ್. ಒಡೇನಪುರ, ಕಾರ್ಯದರ್ಶಿ ಪರಶುರಾಮಪ್ಪ, ಖಜಾಂಚಿ ತಿಪ್ಪೇಸ್ವಾಮಿ ಬಿ.ಆರ್., ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಓಬಳಪ್ಪ ಜಿ., ಪಾಲಾಕ್ಷ ಬಿ., ಅರುಣ ಕೆ., ಬಿ.ಕೆ.ಶಿವಕುಮಾರ, ಸಿ. ನಾಗರಾಜ ಹಾಗೂ ಇನ್ನಿತರರಿದ್ದರು.
ತೆರಿಗೆ ಸಂಗ್ರಹದಲ್ಲಿ ರಾಜ್ಯಕ್ಕೆ 2ನೇ ಸ್ಥಾನ
‘ಹಲವು ಸಮಸ್ಯೆಗಳ ನಡುವೆಯೂ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಇದರಿಂದ ಸರ್ಕಾರಕ್ಕೂ ಉತ್ತಮ ಹೆಸರು ಬರುತ್ತಿದೆ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ‘ಭಾಷೆಯ ಅಸ್ಮಿತೆಯನ್ನು ಉಳಿಸುವ ಉದ್ದೇಶದಿಂದ ಪ್ರತಿ ವರ್ಷ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೌಕರರ ಸಂಘದಿಂದ ದೇಣಿಗೆ ನೀಡಲಾಗುತ್ತದೆ. ಅತಿವೃಷ್ಟಿ ಅನಾವೃಷ್ಟಿ ಏನೇ ಘಟಿಸಿದರೂ ನೌಕರರು ನಾಡಿನ ಒಳಿತಿಗಾಗಿ ಕೆಲಸ ಮಾಡುತ್ತೇವೆ’ ಎಂದರು. ‘ಪ್ರಶಸ್ತಿ ಪಡೆದವರ ಜವಾಬ್ದಾರಿ ಹೆಚ್ಚಾಗಿದ್ದು ಅದನ್ನು ಉಳಿಸಿಕೊಳ್ಳುವಂತಹ ಕೆಲಸ ಮಾಡಬೇಕು. ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಲಿ. ಈ ಕಾರ್ಯಕ್ಕೆ ಸಂಘವೂ ಕೈಜೋಡಿಸುತ್ತದೆ’ ಎಂದು ಹೇಳಿದರು.

