ಚಿಕ್ಕಬಳ್ಳಾಪುರ: ರಸ್ತದ ಮಡುವಿನಲ್ಲಿ ಚೆಲ್ಲಾಪಲ್ಲಿಯಾದ ಶವಗಳು, ನಜ್ಜುಗುಜ್ಜಾದ ಕಾರು, ಬುಲೆರೊ ಸರಕು ಸಾಗಾಣಿಕೆ ವಾಹನದ ಮುಂಭಾಗಕ್ಕೆ ತೀವ್ರ ಹಾನಿ...ಇದು ನಗರ ಹೊರವಲಯದ ಚದುಲಪುರ ಕ್ರಾಸ್ ಬಳಿಯ ನಂದಿಗಿರಿಧಾಮ ಠಾಣೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಬುಧವಾರ ಸಂಜೆ ನಡೆದ ಅಪಘಾತದ ನಂತರ ಕಂಡು ಬಂದ ದೃಶ್ಯಗಳು.

ಬುಧವಾರ ಸಂಜೆ ಇಲ್ಲಿ ಕಾರು ಮತ್ತು ಬೊಲೆರೊ ಸರಕು ಸಾಗಣೆ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಂಗಳೂರು ಯಲಹಂಕದ ನಾಲ್ಕು ಮಂದಿ ಯುವಕರು
ಮೃತಪಟ್ಟಿದ್ದಾರೆ.

ಯಲಹಂಕದ ವೈಷ್ಣವ್ (25), ಸಿದ್ದಾರ್ಥ್ (23), ಯಶವಂತ್ (18), ಶ್ರೇಯಸ್ (18) ಮೃತರು. ಗಂಭೀರವಾಗಿ ಗಾಯಗೊಂಡಿರುವ ದಿನೇಶ್ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಐದು ಮಂದಿ ಸ್ನೇಹಿತರು ಯಲಹಂಕದಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಈಶ ಯೋಗ ಕೇಂದ್ರಕ್ಕೆ ತೆರಳುತ್ತಿದ್ದರು. ಕಾರು ಚದುಲಪುರ ಕ್ರಾಸ್‌ನ ನಂದಿ ಗಿರಿಧಾಮ ಠಾಣೆ ಮುಂಭಾಗ ರಸ್ತೆ ವಿಭಜಕಕ್ಕೆ ಗುದ್ದಿದೆ. ಎದುರು ರಸ್ತೆಯಲ್ಲಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಬೊಲೆರೊ ಸರಕು ಸಾಗಣೆ ವಾಹನಕ್ಕೆ ಡಿಕ್ಕಿಯಾಗಿದೆ.

ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ ಒಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳದಲ್ಲಿನ ಚಿತ್ರಣವೇ ಅಪಘಾತದ ತೀವ್ರತೆಯನ್ನು ಸಾರುತ್ತಿತ್ತು. ನಜ್ಜುಗುಜ್ಜಾದ ಕಾರು ರಸ್ತೆಯ ಬದಿಯಲ್ಲಿದ್ದು ಜನರು ಕುತೂಹಲದಿಂದ ವೀಕ್ಷಿಸಿದರು.

ಶವಗಳನ್ನು ಜಿಲ್ಲಾಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಜಿಲ್ಲಾ ಆಸ್ಪತ್ರೆಯ ಶವಾಗಾರದ ಬಳಿಗೆ ಬಂದ ಮೃತರ ಸಂಬಂಧಿಕರು ಎದೆಬಡಿದುಕೊಂಡು ಕಣ್ಣೀರಿಟ್ಟರು.