ಸಮಾಜವಾದಿ ವಿಚಾರಧಾರೆಗಳ ಅಡಿಯಾಳಾಗಿ ಬೆಳೆದು, ನಾಡು-ನುಡಿಯ ಉಳಿವಿಗಾಗಿ ತನ್ನ ಜೀವಿತಾವಧಿಯನ್ನೆಲ್ಲಾ ಮುಡಿಪಾಗಿಟ್ಟ ಹಿರಿಯ ಚೇತನ ಕೋಣಂದೂರು ಲಿಂಗಪ್ಪ ಕರ್ನಾಟಕದ ಸಾರ್ವಜನಿಕ ಮತ್ತು ರಾಜಕೀಯ ಜೀವನದಲ್ಲಿ ತಮ್ಮದೇ ಆದ ವಿಶಿಷ್ಟ ಹಾಗೂ ಅಳಿಸಲಾಗದ ಮುದ್ರೆಯೊತ್ತಿದ್ದಾರೆ.

ರಾಜಕೀಯವನ್ನು ಅಧಿಕಾರ ದಾಹದ ಸಾಧನವಾಗಿ ನೋಡದೆ, ತುಳಿತಕ್ಕೊಳಗಾದವರ ಪರ ಧ್ವನಿ ಎತ್ತುವ ಜನಪರ ಚಳವಳಿಗಳ ಹಾಗೂ ಭಾಷಾ ಪ್ರೇಮದ ದೊಡ್ಡ ವೇದಿಕೆಯಾಗಿ ಬಳಸಿಕೊಂಡ ಅವರ ಬದುಕಿನಲ್ಲಿ ಕನ್ನಡ ಪರ ಹೋರಾಟ, ಕರ್ನಾಟಕದ ಏಕೀಕರಣ ಮತ್ತು ಕನ್ನಡಿಗರ ಸ್ವಾಭಿಮಾನದ ಹೆಜ್ಜೆಗಳು ಸದಾ ಸ್ಮರಣೀಯವಾಗಿವೆ. ಅಧಿಕಾರ ರಾಜಕಾರಣದ ಮೋಹಕ್ಕೆ ಒಳಗಾಗದೆ ತಾವು ನಂಬಿದ ತತ್ವಗಳಿಗೆ ಬದ್ಧರಾಗಿ ಬದುಕಿದ ಅವರು ಧೈರ್ಯದ ಪ್ರತೀಕ.

ವಿದ್ಯಾರ್ಥಿ ದೆಸೆಯಿಂದಲೇ ಹೋರಾಟದ ಮನೋಭಾವ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನಲ್ಲಿ 1934ರ ಫೆಬ್ರವರಿ 24ರಂದು ಜನಿಸಿದ ಲಿಂಗಪ್ಪ ಅವರು ವಿದ್ಯಾರ್ಥಿ ದೆಸೆಯಿಂದಲೇ ಬಂಡಾಯದ ಹಾಗೂ ಹೋರಾಟದ ಮನೋಭಾವವನ್ನು ಮೈಗೂಡಿಸಿಕೊಂಡವರು. ಮೈಸೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಪೂರೈಸುವ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಯ ಕಿಚ್ಚಿಗೆ ಮೈಯೊಡ್ಡಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆ ದಿನಗಳಲ್ಲಿ ಕರ್ನಾಟಕದ ರಾಜಕೀಯ ಮತ್ತು ಸಮಾಜವಾದಿ ದಿಗ್ಗಜರ ಒಡನಾಟ ಇವರಿಗೆ ಲಭಿಸಿತು. ವಿಶೇಷವಾಗಿ ಶಾಂತವೇರಿ ಗೋಪಾಲಗೌಡರ ಅಚ್ಚುಮೆಚ್ಚಿನ ಶಿಷ್ಯರಾಗಿ ಲಿಂಗಪ್ಪ ಗೋಪಾಲಗೌಡರ ಸಿದ್ಧಾಂತ, ಜನಪರ ಕಾಳಜಿ ಮತ್ತು ಸರಳತೆಯ ಮಾರ್ಗದರ್ಶನದಿಂದ ಪ್ರೇರಿತರಾಗಿ ಅವರು ಬಡವರ, ಶೋಷಿತರ, ಕೃಷಿಕರ ಹಾಗೂ ನೆಲದ ಹಕ್ಕುಗಳ ಧ್ವನಿಯಾಗಿ ರೂಪಗೊಂಡರು. ಗುರುಗಳ ಹೆಜ್ಜೆಗುರುತಿನಲ್ಲಿಯೇ ಸಾಗುತ್ತಾ ಸಮಾಜವಾದಿ ಚಳವಳಿಯ ತಳಪಾಯವನ್ನು ಮಲೆನಾಡಿನಲ್ಲಿ ಗಟ್ಟಿಗೊಳಿಸಿದರು.

ಕನ್ನಡ ಯುವಜನ ಸಭಾ ಸ್ಥಾಪನೆ

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೇವಲ ಮಾತಿನಿಂದಲ್ಲದೆ ಸಂಘಟಿತ ಪ್ರಯತ್ನಗಳ ಮೂಲಕ ಜೀವ ತುಂಬುವ ಅಗತ್ಯತೆಯನ್ನು ಮನಗಂಡ ಅವರು 1956ರ ಮಹತ್ವದ ಘಟ್ಟದಲ್ಲಿ 'ಕನ್ನಡ ಯುವಜನ ಸಭಾ'ವನ್ನು ಸ್ಥಾಪಿಸಿದರು. ಈ ಸಂಘಟನೆಯ ಮೂಲಕ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡಿಗರ ಹಕ್ಕುಗಳ ರಕ್ಷಣೆಗಾಗಿ ಯುವಜನತೆಯನ್ನು ದೊಡ್ಡ ಮಟ್ಟದಲ್ಲಿ ಒಗ್ಗೂಡಿಸಿ ಜಾಗೃತಿ ಮೂಡಿಸುವ ಮಹತ್ತರ ಕೆಲಸಕ್ಕೆ ಮುಂದಾದರು. ಅಂದಿನ ಕಾಲಘಟ್ಟದಲ್ಲಿ ಕನ್ನಡ ಭಾಷೆಯ ದಿನನಿತ್ಯದ ಬಳಕೆ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡದ ಅಸ್ಮಿತೆಯ ವಿಚಾರಗಳನ್ನು ಕೇವಲ ಸಾಹಿತಿಗಳಿಗೆ ಮಾತ್ರ ಸೀಮಿತಗೊಳಿಸದೆ ಸಾರ್ವಜನಿಕ ಚರ್ಚೆಯ ಮುಂಚೂಣಿಗೆ ತಂದ ಹೆಗ್ಗಳಿಕೆ ಸಂಪೂರ್ಣವಾಗಿ ಲಿಂಗಪ್ಪ ಅವರಿಗೆ ಸಲ್ಲುತ್ತದೆ. ಯುವ ಮನಸ್ಸುಗಳಲ್ಲಿ ಮಾತೃಭಾಷೆಯ ಬಗ್ಗೆ ಅಚಲವಾದ ಅಭಿಮಾನವನ್ನು ಬಿತ್ತುವಲ್ಲಿ ಈ ಸಭೆಯು ಐತಿಹಾಸಿಕ ಪಾತ್ರ ವಹಿಸಿತು.

ಕನ್ನಡಪರ ಹೋರಾಟದ ಮತ್ತೊಂದು ಅತ್ಯಂತ ಪ್ರಮುಖ ಮೈಲಿಗಲ್ಲು ಎಂದರೆ ಕರ್ನಾಟಕ ರಾಜ್ಯದ ನಾಮಕರಣ ಹಾಗೂ ಏಕೀಕರಣಕ್ಕೆ ಸಂಬಂಧಿಸಿದ ಐತಿಹಾಸಿಕ ಹಕ್ಕೊತ್ತಾಯ. ಮೈಸೂರು ರಾಜ್ಯ ಎಂಬ ಹೆಸರಿನಡಯಲ್ಲಿದ್ದ ವಿಶಾಲ ಭಾಷಿಕ ಪ್ರದೇಶಕ್ಕೆ 'ಕರ್ನಾಟಕ' ಎಂದು ಅಧಿಕೃತವಾಗಿ ಮರುನಾಮಕರಣ ಮಾಡಬೇಕೆಂದು ಕನ್ನಡಿಗರು ಧ್ವನಿ ಎತ್ತಿದಾಗ, ಆ ಮಹತ್ವದ ಚಳವಳಿಯಲ್ಲಿ ಲಿಂಗಪ್ಪ ಅವರು ಮುಂಚೂಣಿಯಲ್ಲಿದ್ದು ಸಕ್ರಿಯವಾಗಿ ಹೋರಾಡಿದರು. ಕನ್ನಡ ನಾಡಿನ ಭಾಷಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿಹಿಡಿಯುವ ಪ್ರತಿಯೊಂದು ಏಕೀಕರಣದ ಹೆಜ್ಜೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು, ರಾಜ್ಯದ ನಾಮಕರಣವು ಕೇವಲ ಕಾಗದದ ಮೇಲಿನ ಬದಲಾವಣೆ ಅಲ್ಲ, ಅದು ಕೋಟ್ಯಂತರ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ ಎಂದು ಪ್ರತಿಪಾದಿಸಿದರು.

ಪ್ರಮುಖ ನಾಯಕರ ಜೊತೆ ಒಡನಾಟ

ಆದರೆ ಕೋಣಂದೂರು ಲಿಂಗಪ್ಪ ಅವರ ಕನ್ನಡಪರ ಚಿಂತನೆಗಳು ಮತ್ತು ಹೋರಾಟಗಳು ಕೇವಲ ಭಾಷಾಭಿಮಾನಕ್ಕಷ್ಟೇ ಸೀಮಿತವಾಗಿರಲಿಲ್ಲ. ಭಾಷೆ, ನೆಲ, ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯ ಇವೆಲ್ಲವೂ ಒಂದಕ್ಕೊಂದು ಬೇರ್ಪಡಿಸಲಾಗದಷ್ಟು ಪೂರಕವಾಗಿವೆ ಎಂಬ ವಿಶಾಲವಾದ ಹಾಗೂ ದೂರದೃಷ್ಟಿಯ ಚಿಂತನೆ ಅವರದಾಗಿತ್ತು. ತಮ್ಮ ಗುರು ಶಾಂತವೇರಿ ಗೋಪಾಲಗೌಡರ ಮಾರ್ಗದರ್ಶನದಲ್ಲಿ ಮುಂದುವರಿದು, ಕಾಗೋಡು ತಿಮ್ಮಪ್ಪ ಹಾಗೂ ಎಸ್. ಬಂಗಾರಪ್ಪ ಮೊದಲಾದ ಪ್ರಖ್ಯಾತ ಧುರೀಣರೊಂದಿಗೆ ಕೈಜೋಡಿಸಿ ಗೇಣಿದಾರರ ಹಕ್ಕುಗಳಿಗಾಗಿ, ರೈತರ ಭೂಮಿಗಾಗಿ ಐತಿಹಾಸಿಕ ಹೋರಾಟಗಳನ್ನು ಸಂಘಟಿಸಿದರು. ಬಡ ರೈತರಿಗೆ ಭೂಮಿ ಸಿಗಬೇಕೆಂದು ಭೂಸುಧಾರಣೆ ಪರವಾಗಿ ದೃಢವಾಗಿ ನಿಂತರು. ಜೊತೆಗೆ, ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಫಲ ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹಾವನೂರು ವರದಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಸದನದ ಒಳಗೂ ಹೊರಗೂ ರಾಜಿರಹಿತ ಧ್ವನಿ ಎತ್ತಿದರು.

ಜನರ ಸಂಕಷ್ಟಗಳಿಗೆ ಕೇವಲ ಹೊರಗಿನಿಂದ ಹೋರಾಟ ಮಾಡುವುದು ಮಾತ್ರವಲ್ಲದೆ, ಶಾಸಕಾಂಗದ ಒಳಗೆ ಪ್ರವೇಶಿಸಿಯೂ ತಮ್ಮ ಬದ್ಧತೆಯನ್ನು ಮೆರೆದರು. 1972ರಿಂದ 1978ರವರೆಗೆ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಜನತೆಯ ಸೇವೆ ಸಲ್ಲಿಸಿದ ಅವರು, ಸದನದಲ್ಲಿ ಬಡವರು, ರೈತರು ಹಾಗೂ ಕಾರ್ಮಿಕರ ನಿಜವಾದ ಕೊರಳುಗಳಾಗಿ ಮೆರೆದರು. ರಾಜಕೀಯ ಅಧಿಕಾರವನ್ನು ಯಾವತ್ತಿಗೂ ವೈಯಕ್ತಿಕ ಲಾಭಕ್ಕಾಗಿ, ಆಸ್ತಿ ಮಾಡಲು ಅಥವಾ ಅಧಿಕಾರದ ಚುಕ್ಕಾಣಿ ಹಿಡಿಯಲು ಬಳಸಿಕೊಳ್ಳದೆ, ತಾವು ನಂಬಿದ ಸಮಾಜವಾದಿ ಸಿದ್ಧಾಂತಗಳಿಗೆ ಅಚಲವಾಗಿ ಬದ್ಧರಾಗಿ ಬಾಳಿದ ಧನ್ಯ ಜೀವಿ ಅವರು.

ಕನ್ನಡದ ಕುರಿತು ಇಂದಿಗೂ ಅಚಲ ಪ್ರೇಮ

ಕನ್ನಡ ಭಾಷೆಯ ಇಂದಿನ ಒಟ್ಟು ಸ್ಥಿತಿಗತಿಗಳ ಬಗ್ಗೆಯೂ ಲಿಂಗಪ್ಪ ಅವರಿಗೆ ಇಂದಿಗೂ ಅಪಾರವಾದ ಕಾಳಜಿ ಮತ್ತು ಕಳಕಳಿಯಿದೆ. ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗೋಕಾಕ್ ಚಳವಳಿಯ ಸವಿ ನೆನಪಿನಲ್ಲಿ ಅವರಿಗೆ 'ಕನ್ನಡ ಚಳವಳಿಯ ಪ್ರವರ್ತಕ ಸನ್ಮಾನ' ನೀಡಿ ಗೌರವಿಸಿದಾಗ, ಅವರು ಆ ಸಂದರ್ಭದಲ್ಲಿ ಆಡಿದ ಮಾತುಗಳು ಪ್ರತಿಯೊಬ್ಬ ಕನ್ನಡಿಗರು ಆಳವಾಗಿ ಯೋಚಿಸುವಂತೆ ಮಾಡಿದ್ದವು. ಕನ್ನಡ ಭಾಷೆ ಇಂದು ಸೊರಗುತ್ತಿರುವುದಕ್ಕೆ ಕೇವಲ ಸರ್ಕಾರದ ನಿರ್ಲಕ್ಷ್ಯದ ಧೋರಣೆಯಷ್ಟೇ ಅಲ್ಲ, ಬದಲಿಗೆ ಜನಸಾಮಾನ್ಯರಲ್ಲಿ ಭಾಷೆಯ ಬಗ್ಗೆ ಬೆಳೆಯುತ್ತಿರುವ ಅನಾಸಕ್ತಿಯೂ ಪ್ರಮುಖ ಕಾರಣ ಎಂದು ಅವರು ಎಚ್ಚರಿಸಿದ್ದರು. ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಕೇವಲ ಹೋರಾಟಗಾರರ ಅಲ್ಪಸ್ವಲ್ಪ ಶ್ರಮ ಮಾತ್ರ ಸಾಲದು, ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲೂ ಸ್ವಭಾಷೆಯ ಬಗ್ಗೆ ಅಚ್ಚಳಿಯದ ಹೆಮ್ಮೆ ಮತ್ತು ಜವಾಬ್ದಾರಿ ಇರಬೇಕು ಎಂಬ ಅವರ ನಿಲುವು ಇಂದಿನ ಯುವ ಪೀಳಿಗೆಗೆ ಅತ್ಯಂತ ಪ್ರಸ್ತುತವಾಗಿದೆ.

ದೇವರಾಜ ಅರಸು, ರಾಜ್ಯೋತ್ಸವ ಪ್ರಶಸ್ತಿ

ಅವರ ದೀರ್ಘಕಾಲದ ನಿಸ್ವಾರ್ಥ ಸಮಾಜಸೇವೆ, ಜನಪರ ಹೋರಾಟ ಮತ್ತು ಕನ್ನಡ ನುಡಿಗಾಗಿ ಅವರು ಸಲ್ಲಿಸಿದ ಅನನ್ಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2013ರಲ್ಲಿ ಪ್ರತಿಷ್ಠಿತ 'ದೇವರಾಜ ಅರಸು ಪ್ರಶಸ್ತಿ' ನೀಡಿ ಗೌರವಿಸಿತು. ತದನಂತರ 2025ನೇ ಸಾಲಿನ ರಾಜ್ಯದ ಅತ್ಯುನ್ನತ ಗೌರವವಾದ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ'ಯೂ ಅವರಿಗೆ ಒಲಿದುಬಂದು ಅವರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿತು.

ಒಟ್ಟಾರೆಯಾಗಿ ಹೇಳುವುದಾದರೆ, ಕೋಣಂದೂರು ಲಿಂಗಪ್ಪ ಅವರ ಇಡೀ ಜೀವಮಾನದ ಬದುಕು ಎಂದರೆ ಅದು ಕನ್ನಡಪರ ಹೋರಾಟ, ಸಮಾಜವಾದಿ ಚಿಂತನೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳ ಅತ್ಯಂತ ಸುಂದರವಾದ ಸಮನ್ವಯವಾಗಿದೆ. ಕನ್ನಡವೆಂದರೆ ಕೇವಲ ವ್ಯವಹಾರದ ಅಥವಾ ಸಂವಹನದ ಒಂದು ಭಾಷೆಯಲ್ಲ, ಅದು ಒಂದು ನಾಡಿನ ಬದುಕು, ವಿಶಿಷ್ಟ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನದ ಅಳಿಸಲಾಗದ ಪ್ರತೀಕ ಎಂಬುದನ್ನು ತಮ್ಮ ಜೀವಿತಾವಧಿಯ ಪ್ರತಿ ಹೆಜ್ಜೆಯಲ್ಲೂ ಪ್ರತಿಪಾದಿಸಿದ ಅಪ್ಪಟ ಕನ್ನಡಿಗ ಅವರು. ಇಂದಿನ ಹೊಸ ತಲೆಮಾರಿನಲ್ಲಿ ಕನ್ನಡದ ಬಗ್ಗೆ ಅಭಿಮಾನ, ಮಾತೃಭಾಷೆಯ ಬಗ್ಗೆ ಆಳವಾದ ಜವಾಬ್ದಾರಿ ಮತ್ತು ಸಮಾಜಮುಖಿ ಹೋರಾಟಗಳ ಬಗ್ಗೆ ಆಸಕ್ತಿ ಮೂಡಬೇಕಾದರೆ, ಕೋಣಂದೂರು ಲಿಂಗಪ್ಪ ಅವರಂತಹ ಅಪರೂಪದ ಹಿರಿಯ ನಾಯಕರ ಬದುಕು ಮತ್ತು ಸಾಧನೆಗಳನ್ನು ತಿಳಿದುಕೊಳ್ಳುವುದು ಮತ್ತು ಅನುಸರಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.