ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟೆಸ್ಟ್ ಸರಣಿ ಶುರುವಾಗಿದೆ. ವೆಲ್ಲಿಂಗ್ಟನ್​ನ ಬೇಸಿನ್ ರಿಸರ್ಸ್​ ಮೈದಾನದಲ್ಲಿ ನಡೆಯುತ್ತಿರುವ ಈ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ
ಬ್ಯಾಟಿಂಗ್ ಆಯ್ದುಕೊಂಡಿದೆ. ಅದರಂತೆ ಮೊದಲು ಬೌಲಿಂಗ್ ಮಾಡುತ್ತಿರುವ ನ್ಯೂಝಿಲೆಂಡ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿದೆ.

ಜಸ್‌ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿದ ಕಿವೀಸ್ ಪಡೆ, 70 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಹೆನ್ರಿ ನಿಕೋಲ್ಸ್ 46 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ಅದರಂತೆ 34 ಓವರ್‌ಗಳ ಮುಕ್ತಾಯದ ವೇಳೆಗೆ ನ್ಯೂಝಿಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 95 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಬುಮ್ರಾ 3 ವಿಕೆಟ್ ಪಡೆದರೆ, ಆಕಾಶ್ ದೀಪ್ ಹಾಗೂ ಅನ್ಶುಲ್ ಕಂಬೋಜ್ ತಲಾ 1 ವಿಕೆಟ್ ಕಬಳಿಸಿದ್ದಾರೆ.

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ ,
ಡ್ಯಾರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ.

ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್ , ದೇವದತ್ ಪಡಿಕ್ಕಲ್ , ಶುಭ್​ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಧ್ರುವ್ ಜುರೆಲ್ , ಆಕಾಶ್ ದೀಪ್ , ಅನ್ಶುಲ್ ಕಂಬೋಜ್ , ಜಸ್​ಪ್ರೀತ್ ಬುಮ್ರಾ , ಪ್ರಸಿದ್ಧ್ ಕೃಷ್ಣ.

WTC ಫೈನಲ್ ರೇಸ್:

2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಹಂತಕ್ಕೆ ತಲುಪುವ ನಿಟ್ಟಿನಲ್ಲಿ ಈ ಸರಣಿಯು ಉಭಯ ತಂಡಗಳಿಗೂ ಅತ್ಯಂತ ನಿರ್ಣಾಯಕ ಘಟ್ಟವಾಗಿದೆ. ಪ್ರಸ್ತುತ ಅಂಕಪಟ್ಟಿಯಲ್ಲಿ 51.52% ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾಕ್ಕೆ ಈ ಸರಣಿಯಲ್ಲಿ ಕೇವಲ 7 ಪಂದ್ಯಗಳು ಮಾತ್ರ ಬಾಕಿ ಉಳಿದಿದ್ದು, ಫೈನಲ್ ರೇಸ್‌ನಲ್ಲಿ ಜೀವಂತವಾಗಿರಲು ಈ ಸರಣಿಯ ಎರಡೂ ಪಂದ್ಯಗಳಲ್ಲಿ ಜಯಗಳಿಸುವುದು ಅನಿವಾರ್ಯವಾಗಿದೆ.

ನ್ಯೂಝಿಲೆಂಡ್ ವಿರುದ್ಧದ ಈ ಸರಣಿಯಲ್ಲಿ ಎದುರಾಗುವ ಒಂದು ಸಣ್ಣ ಹಿನ್ನಡೆಯೂ ಭಾರತದ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಲಿದೆ. ಇನ್ನೊಂದೆಡೆ, 72.22% ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ನ್ಯೂಝಿಲೆಂಡ್‌ಗೆ, ಮುಂದಿನ ದಿನಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅವರದೇ ನೆಲದಲ್ಲಿ ಕಠಿಣ ಸವಾಲು ಎದುರಾಗಲಿರುವುದರಿಂದ, ತವರಿನ ಪಿಚ್‌ಗಳ ಸಂಪೂರ್ಣ ಲಾಭ ಪಡೆದು ಭಾರತವನ್ನು ಮಣಿಸುವ ಮೂಲಕ ಫೈನಲ್ ಟಿಕೆಟ್ ಅನ್ನು ಈಗಲೇ ಖಚಿತಪಡಿಸಿಕೊಳ್ಳುವ ಸುವರ್ಣಾವಕಾಶವಿದೆ.

ಉಭಯ ತಂಡಗಳ ಮುಖಾಮುಖಿ:

1955 ರಿಂದ ಇಲ್ಲಿಯವರೆಗೆ ಭಾರತ ಮತ್ತು ನ್ಯೂಝಿಲೆಂಡ್ ನಡುವೆ ಒಟ್ಟು 65 ಟೆಸ್ಟ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಭಾರತವು 22 ಪಂದ್ಯಗಳನ್ನು ಗೆದ್ದು ಮುನ್ನಡೆ ಸಾಧಿಸಿದರೆ, ನ್ಯೂಝಿಲೆಂಡ್ 16 ಪಂದ್ಯಗಳಲ್ಲಿ ಜಯಗಳಿಸಿದೆ. ಇನ್ನು 27 ಪಂದ್ಯಗಳು ಡ್ರಾ ಆಗಿವೆ.

ಭಾರತದ ನೆಲದಲ್ಲಿ ನಡೆದ 39 ಪಂದ್ಯಗಳಲ್ಲಿ ಟೀಮ್ ಇಂಡಿಯಾ 17 ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದ್ದರೆ (ನ್ಯೂಝಿಲೆಂಡ್ ಗೆಲುವು 5, ಡ್ರಾ 17), ನ್ಯೂಝಿಲೆಂಡ್ ನೆಲದಲ್ಲಿ ನಡೆದ 25 ಪಂದ್ಯಗಳಲ್ಲಿ ಕಿವೀಸ್ ಪಡೆ 10 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದೆ (ಭಾರತದ ಗೆಲುವು 5, ಡ್ರಾ 10).

ಇನ್ನು ಇಂಗ್ಲೆಂಡ್‌ನಲ್ಲಿ ನಡೆದ 2021ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ಜಯಗಳಿಸಿತ್ತು. ಸರಣಿಗಳ ಲೆಕ್ಕಾಚಾರದಲ್ಲಿ ಇಲ್ಲಿಯವರೆಗೆ ನಡೆದಿರುವ ಒಟ್ಟು 24 ಸರಣಿಗಳಲ್ಲಿ ಭಾರತ 12 ಸರಣಿಗಳನ್ನು ಗೆದ್ದಿದ್ದರೆ, ನ್ಯೂಝಿಲೆಂಡ್ 8 ಸರಣಿಗಳನ್ನು ತನ್ನದಾಗಿಸಿಕೊಂಡಿದೆ.

ನ್ಯೂಝಿಲೆಂಡ್ ಟೆಸ್ಟ್ ತಂಡ: ಟಾಮ್‌ ಲ್ಯಾಥಮ್‌ (ನಾಯಕ), ಟಾಮ್‌ ಬ್ಲಂಡೆಲ್‌, ಡೆವೊನ್‌ ಕಾನ್ವೇ, ಜೇಕಬ್‌ ಡಫಿ, ಮ್ಯಾಟ್‌ ಹೆನ್ರಿ, ಕೈಲ್‌ ಜೇಮಿಸನ್‌, ಡ್ಯಾರಿಲ್‌ ಮಿಚೆಲ್‌, ಹೆನ್ರಿ ನಿಕೋಲ್ಸ್‌, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ನಾಥನ್‌ ಸ್ಮಿತ್‌, ಬ್ಲೇರ್‌ ಟಿಕ್ನರ್‌, ವಿಲ್‌ ಯಂಗ್‌, ಡೀನ್ ಫಾಕ್ಸ್‌ಕ್ರಾಫ್ಟ್.

ಭಾರತದ ಟೆಸ್ಟ್ ತಂಡ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅನ್ಶುಲ್ ಕಂಬೋಜ್, ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಸಾಯಿ ಸುದರ್ಶನ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಗುರ್ನೂರ್ ಬ್ರಾರ್.