ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟನಿ ತಮ್ಮ ಹಿರಿಯ ಮಗಳು ಮೀರಾಳನ್ನು ಕಳೆದುಕೊಂಡ ನೋವಿನಿಂದ ಇನ್ನೂ ಹೊರಬಂದಿಲ್ಲ. 2023ರ ಸೆಪ್ಟೆಂಬರ್ನಲ್ಲಿ ಮಗಳು ನಿಧನರಾದ ಬಳಿಕ ಅವರು ಚಪ್ಪಲಿ ಧರಿಸುವುದನ್ನೇ ಬಿಟ್ಟಿದ್ದಾರೆ. ಮೀರಾ ಕೊನೆಯ ಬಾರಿಗೆ ಕಟ್ಟಿದ್ದ ಕೈಗಡಿಯಾರವನ್ನೇ ಇಂದಿಗೂ ಕಟ್ಟಿಕೊಂಡು ಮಗಳ ನೆನಪಲ್ಲೇ ಬದುಕುತ್ತಿದ್ದಾರೆ ಎಂದು ಪತ್ನಿ ಫಾತಿಮಾ ಭಾವುಕರಾಗಿ ಹೇಳಿದ್ದಾರೆ.
ತಂದೆ-ಮಗಳ ಬಾಂಧವ್ಯದ ಕಥೆ ಹೊಂದಿರುವ ‘ಅಪ್ಪ ಕುಟ್ಟಿ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಫಾತಿಮಾ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಮಗಳ ಸಾವಿನ ನಂತರ ತಾವು ಯಾವುದೇ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ಸುಮಾರು ಐದು ವರ್ಷಗಳ ನಂತರ ಈಗ ಮೊದಲ ಬಾರಿಗೆ ಸಾರ್ವಜನಿಕ ವೇದಿಕೆಗೆ ಬಂದಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
‘ಮೀರಾಳಿಗಾಗಿ ಮನೆಯಲ್ಲಿ ಒಂದು ಕೋಣೆ ತುಂಬಾ ಚಪ್ಪಲಿ ಮತ್ತು ಶೂಗಳನ್ನು ತಂದಿಡಲಾಗಿತ್ತು. ಅವುಗಳನ್ನು ನೋಡಿದ ನಂತರ ವಿಜಯ್ ಆಂಟನಿ ಚಪ್ಪಲಿ ಹಾಕುವುದನ್ನು ನಿಲ್ಲಿಸುವ ನಿರ್ಧಾರ ಮಾಡಿದರು. ಈಗ ಕೇವಲ ಕೆಲವು ಕಾರ್ಯಕ್ರಮಗಳಿಗಾಗಿ ಮಾತ್ರ ಅವರು ಶೂ ಧರಿಸುತ್ತಾರೆ. ಅವರ ಬಳಿ ಅನೇಕ ದುಬಾರಿ ವಾಚ್ಗಳಿದ್ದರೂ ಅವುಗಳನ್ನು ಬಳಸುತ್ತಿಲ್ಲ. ಬದಲಾಗಿ ಮಗಳನ್ನು ಕೊನೆಯದಾಗಿ ನೋಡಿದಾಗ ಆಕೆಯ ಕೈಯಲ್ಲಿದ್ದ ಸಾಧಾರಣ ವಾಚ್ ಅನ್ನೇ ದಿನವೂ ಕಟ್ಟಿಕೊಳ್ಳುತ್ತಿದ್ದಾರೆ’ ಎಂಬ ವಿಷಯವನ್ನು ಫಾತಿಮಾ ರಿವೀಲ್ ಮಾಡಿದ್ದಾರೆ.
‘ನಾನು ಏಳು ವರ್ಷದವಳಿದ್ದಾಗ ನನ್ನ ತಂದೆ ಕುಟುಂಬವನ್ನು ಬಿಟ್ಟು ಹೋಗಿದ್ದರು. ತಂದೆಯ ಪ್ರೀತಿಯನ್ನು ತಮಗೆ ನೀಡಿದ್ದು ವಿಜಯ್ ಆಂಟನಿ’ ಎಂದು ಫಾತಿಮಾ ಭಾವುಕರಾದರು. ಕಾರ್ಯಕ್ರಮದಲ್ಲಿ ವಿಜಯ್ ಆಂಟನಿ ಅವರ ಕಿರಿಯ ಮಗಳು ಲಾರಾ ಕೂಡ ಭಾಗವಹಿಸಿದ್ದರು. ವೇದಿಕೆಯಲ್ಲಿ ಮಾತನಾಡಿದ ವಿಜಯ್ ಆಂಟನಿ, ಈ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ತಮ್ಮ ತಂದೆಗೆ ಕರೆ ಮಾಡಿ ಮಾತನಾಡಬೇಕು ಅನಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಹೊಸಬರ ಸಸ್ಪೆನ್ಸ್ ಕತೆಗೆ ಮರುಳಾದ ನಟ ನೀನಾಸಂ ಸತೀಶ್
2023ರಲ್ಲಿ ಆಳ್ವಾರ್ಪೇಟೆಯ ನಿವಾಸದಲ್ಲಿ 16 ವರ್ಷದ ಮೀರಾ ಆತ್ಮಹತ್ಯೆಗೆ ಶರಣಾಗಿದ್ದರು. ಅಂದಿನಿಂದ ವಿಜಯ್ ಆಂಟನಿ ಅವರ ಫಿಲ್ಮ್ ಕಾರ್ಪೊರೇಷನ್ ನಿರ್ಮಿಸುವ ಎಲ್ಲಾ ಚಿತ್ರಗಳಿಗೂ ಫಾತಿಮಾ ಮತ್ತು ಮೀರಾ ಹೆಸರನ್ನೇ ನಿರ್ಮಾಪಕರಾಗಿ ಹಾಕಲಾಗುತ್ತಿದೆ. ಮಾರನ್ ನಿರ್ದೇಶನದ ‘ಅಪ್ಪ ಕುಟ್ಟಿ’ ಚಿತ್ರದಲ್ಲಿ ಪ್ರೀತಿ ಅಸ್ರಾನಿ ನಾಯಕಿಯಾಗಿದ್ದಾರೆ. ಈ ಸಿನಿಮಾ ಇಂದು (ನವೆಂಬರ್ 19) ಧನುಷ್ ಅವರ ‘ಓಂ: ಚಾಪ್ಟರ್ 1’ ಹಾಗೂ ‘ಆಕಾಶಂಲೋ ಒಕ ತಾರಾ’ ಚಿತ್ರಗಳ ಜೊತೆ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

